ಗುವಾಹಟಿ: ಅಸ್ಸಾಂನ ಧಿಂಗ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಕೊಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಫಜುಲ್ ಇಸ್ಲಾಂ ಎಂದೂ ಕರೆಯಲ್ಪಡುವ ತಫೀಕುಲ್ ಇಸ್ಲಾಂನನ್ನು ಪೊಲೀಸರು ಶನಿವಾರ ಮುಂಜಾನೆ ಅಪರಾಧ ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ದಿದ್ದರು. ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿರುವಾಗ ಇಸ್ಲಾಂ ಪರಾರಿಯಾಗಲು ಯತ್ನಿಸಿ ಸಮೀಪದ ಕೆರೆಗೆ ಹಾರಿದ್ದಾನೆ ಎಂದು ನಾಗಾನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನಿಲ್ ದೇಕಾ ತಿಳಿಸಿದ್ದಾರೆ. ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿತ್ತು. ಪ್ರಕರಣದ ಮರುಸೃಷ್ಠಿಗೆ ಆತನನ್ನು ಶನಿವಾರ ಮುಂಜಾನೆ 3.30ಕ್ಕೆ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಪೊಲೀಸ್ ವಶದಿಂದ ಆರೋಪಿ ತಪ್ಪಿಸಿಕೊಂಡ ಆರೋಪಿ ಕೆರೆಗೆ ಹಾರಿದ್ದಾನೆ. ತಕ್ಷಣವೇ ಆತನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ಎರಡು ತಾಸಿನ ಬಳಿಕ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಬೋರಭೇಟಿ ಗ್ರಾಮಸ್ಥರು ಸಭೆ ನಡೆಸಿ ಯುವಕರು ಎಸಗಿದ ಅಪರಾಧಕ್ಕೆ ಸಂಬಂಧಿಸಿದಂತೆ ಗ್ರಾಮದ ಸ್ಮಶಾನದಲ್ಲಿ ಆತನ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ. ಇದೇ ವೇಳೆ, ಘಟನೆಯನ್ನು ವಿರೋಧಿಸಿ ಗ್ರಾಮದ ಮಸೀದಿಯಿಂದ ಮೆರವಣಿಗೆಯನ್ನೂ ನಡೆಸಲಾಯಿತು. ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಬರುತ್ತಿದ್ದ 14 ವರ್ಷದ ಬಾಲಕಿಯನ್ನು, ಬೈಕ್‌ನಲ್ಲಿ ಬಂದ ಮೂವರು ಸುತ್ತುವರಿದು ಅತ್ಯಾಚಾರ ಎಸಗಿದ್ದರು. ಗುರುವಾರ ಸಂಜೆ ಧಿಂಗ್ ಎಂಬಲ್ಲಿ ಈ ಘಟನೆ ನಡೆದಿತ್ತು. ಗಾಯಗೊಂಡು ಮೂರ್ಚೆ ಹೋಗಿದ್ದ ಬಾಲಕಿ ಕೆರೆ ಸಮೀಪದ ರಸ್ತೆ ಬದಿಯಲ್ಲಿ ಬಿದ್ದಿದ್ದಳು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
Advertisement