ಹೈದರಾಬಾದ್: ಕೆರೆಗಳನ್ನು ಒತ್ತುವರಿ ಮಾಡಿದವರನ್ನು ಸರ್ಕಾರ ಬಿಡುವ ಪ್ರಶ್ನೆಯೇ ಇಲ್ಲ. ಸಮಾಜದಲ್ಲಿ ಅವರು ಎಷ್ಟೇ ಪ್ರಭಾವಿಗಳಾದರೂ ಸರಿಯೇ ಅಂತಹ ಚಟುಟಿಕೆಗಳಿಗೆ ಕಡಿವಾಣ ಹಾಕಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ.
ಖ್ಯಾತ ನಟ ನಾಗಾರ್ಜುನ ಅವರ ಸಹ-ಮಾಲೀಕತ್ವದ ಕನ್ವೆನ್ಷನ್ ಸೆಂಟರ್ ಅನ್ನು ಹೈದ್ರಾ ಅಧಿಕಾರಿಗಳು ನೆಲಸಮಗೊಳಿಸಿದ ಒಂದು ದಿನದ ನಂತರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
ಸರ್ಕಾರದ ಭಾಗವಾಗಿದ್ದರೂ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಯಾವುದೇ ಒತ್ತಡಕ್ಕೆ ಸರ್ಕಾರ ಮಣಿಯುವುದಿಲ್ಲ ಎಂದಿದ್ದಾರೆ.
ಹರೇ ಕೃಷ್ಣ ಚಳವಳಿಯಲ್ಲಿ ಮಾತನಾಡಿದ ಅವರು, ಜನರ ಒಳಿತನ್ನು ಸಾರುವ ಶ್ರೀಕೃಷ್ಣನ ಬೋಧನೆಗಳನ್ನು ನಾವು ಅನುಸರಿಸಬೇಕು, ಅಧರ್ಮವನ್ನು ಸೋಲಿಸುವ ಧರ್ಮವನ್ನು ಹಿಂಬಾಲಿಸಬೇಕು ಎಂದರು.
ಫಾರ್ಮ್ ಹೌಸ್ ಇರುವ ನಮ್ಮ ಸ್ನೇಹಿತರ ವಿರೋಧದ ನಡುವೆಯೂ ಕೆರೆ ಹಾಗೂ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಲು ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ ಸೃಷ್ಟಿಸಲಾಗಿದೆ. ಕೆಲವು ಉತ್ತಮ ಜನ ಅದರ ಭಾಗವಾಗಿರಲು ನಾನು ಬಯಸುತ್ತೇನೆ. ಕೆರೆಗಳನ್ನು ಒತ್ತುವರಿಗಳಿಂದ ಮುಕ್ತಿಗೊಳಿಸುವುದು ಇದರ ಗುರಿ. ಒತ್ತುವರಿಯನ್ನು ಮುಲಾಜಿಲ್ಲದೆ ಹತ್ತಿಕ್ಕುತ್ತೇವೆ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು.
ಕೆರೆಗಳು ಭಾರತದ ಸಂಸ್ಕೃತಿಯ ಭಾಗ. ಜೀವನೋಪಾಯಕ್ಕೆ ಜನರು ಅದನ್ನು ಆಶ್ರಯಿಸಿದ್ದಾರೆ. ಕೆರೆ ಸಮೀಪ ನಿರ್ಮಿಸಲಾಗಿರುವ ತೋಟದ ಮನೆಯವರು ಕಲುಷಿತ ನೀರನ್ನು ಕೆರೆಗಳಿಗೆ ಬಿಡುತ್ತಿದ್ದಾರೆ. ಕೆರೆಗಳು ಹಾಗೂ ಜನರ ಹಿತಾಸಕ್ತಿಯನ್ನು ಕಾಪಾಡದಿದ್ದರೆ ನಾನು ನಿಜವಾದ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
Advertisement