ನವದೆಹಲಿ: ರೈತರ ಹೋರಾಟ ಕುರಿತು ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಾಚಿಕೆಗೇಡಿನ ರೈತ ವಿರೋಧಿ ಹೇಳಿಕೆಗಳು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಜೊತೆಗೆ ಇಡೀ ದೇಶದ ರೈತರಿಗೆ ಮಾಡಿದ ಘೋರ ಅವಮಾನ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ನಾಚಿಕೆಗೇಡಿನ ಮತ್ತು ಅತ್ಯಂತ ಖಂಡನೀಯ ರೈತ ವಿರೋಧಿ ಸಿದ್ಧಾಂತವು ಮೋದಿ ಸರ್ಕಾರದ ಡಿಎನ್‌ಎ ಎಂದು ಹೇಳಿದ್ದಾರೆ. ರಣಾವತ್ ಅವರ ಹೇಳಿಕೆಯನ್ನು ಬಿಜೆಪಿ ಒಪ್ಪದಿದ್ದರೆ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ರೈತ ಹೋರಾಟವನ್ನು ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸದೇ ಇದ್ದಿದ್ದರೆ ಬಾಂಗ್ಲಾ ದೇಶದ ರೀತಿಯಲ್ಲಿ ಸಮಸ್ಯೆ ಎದುರಾಗುತ್ತಿತ್ತು ಎಂದು ಕಂಗನಾ ಹೇಳಿಕೆ ನಂತರ ಅವರ ವಿರುದ್ಧ ವಿಪಕ್ಷಗಳು ಕಿಡಿಕಾರುತ್ತಿವೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರದ ಪ್ರಚಾರ ಯಂತ್ರ ನಿರಂತರವಾಗಿ ರೈತರನ್ನು ಅವಮಾನಿಸುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement