ನವದೆಹಲಿ: ರೈತರ ಪ್ರತಿಭಟನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಕೇಸರಿ ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಭವಿಷ್ಯದಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ ನೀಡಿದೆ.
ದೇಶದಲ್ಲಿ ಬಾಂಗ್ಲಾದೇಶದಂತಹ ಅರಾಜಕತೆ ಸೃಷ್ಟಿಸಲು ರೈತರ ಪ್ರತಿಭಟನೆಯಲ್ಲಿ ಯೋಜನೆ ರೂಪಿಸಲಾಗಿತ್ತು ಎಂದು ಕಂಗನಾ ರಣಾವತ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಎಕ್ಸ್ ನಲ್ಲಿ ಮಂಡಿ ಸಂಸದೆ ಹಂಚಿಕೊಂಡ ವಿಡಿಯೋದಲ್ಲಿ, ಈಗ ರದ್ದಾದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಂದರ್ಭದಲ್ಲಿ "ಹೆಣಗಳು ನೇತಾಡುತ್ತಿದ್ದವು ಮತ್ತು ಅತ್ಯಾಚಾರಗಳು ನಡೆದಿವೆ" ಎಂದು ಆರೋಪಿಸಿದ್ದಾರೆ.
ಕಂಗನಾ ಹೇಳಿಕೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, "ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ. ಸಂಸದೆಯ ರೈತ ವಿರೋಧಿ ಹೇಳಿಕೆ ಒಪ್ಪಲು ಸಾಧ್ಯವಿಲ್ಲ" ಎಂದು ಹೇಳಿದೆ.
ಬಿಜೆಪಿ ಪರವಾಗಿ, ಪಕ್ಷದ ಮತ್ತು ಸರ್ಕಾರದ ನೀತಿಗಳ ಕುರಿತು ಹೇಳಿಕೆ ನೀಡಲು ಕಂಗನಾ ರಣಾವತ್ ಅವರಿಗೆ ಅನುಮತಿ ಇಲ್ಲ ಅಥವಾ ಅಧಿಕಾರ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಕಂಗನಾ ರಣಾವತ್ ಅವರಿಗೆ ಭವಿಷ್ಯದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಇಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಜನತಾ ಪಕ್ಷವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್' ಮತ್ತು ಸಾಮಾಜಿಕ ಸಾಮರಸ್ಯದ ತತ್ವಗಳನ್ನು ಅನುಸರಿಸಲು ಬದ್ಧವಾಗಿದೆ" ಎಂದು ಬಿಜೆಪಿ ಹೇಳಿದೆ.
Advertisement