
ಕೋಲ್ಕತಾ: ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಬಂಗಾಳದಲ್ಲಿ ನಡೆಯುತ್ತಿರುವ 'Nabanna Abhijan' ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ.
ಆರ್.ಜಿ ಕರ್ ಕಾಲೇಜು ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿ ‘ಪಶ್ಚಿಮ್ ಬಂಗಾ ಛತ್ರ ಸಮಾಜ’ ವಿದ್ಯಾರ್ಥಿ ಸಂಘಟನೆ ಮತ್ತು ರಾಜ್ಯ ಸರ್ಕಾರಿ ನೌಕರರ ವೇದಿಕೆ 'ಸಂಗ್ರಾಮಿ ಜೌತ ಮಂಚ' ಪಶ್ಚಿಮ ಬಂಗಾಳದ ರಾಜ್ಯ ಸಚಿವಾಲಯ ‘ನಬನ್ನ’ ಕಡೆಗೆ ಮೆರವಣಿಗೆ ನಡೆಸಲು(ನಬನ್ನ ಅಭಿಜಾನ್) ಇಂದು ಕರೆ ನೀಡಿದ್ದವು.
ಮಂಗಳವಾರ ಮಧ್ಯಾಹ್ನ ಹೌರಾ ಮೈದಾನದ ಜಿಟಿ ರಸ್ತೆಯಲ್ಲಿ ಪ್ರತಿಭಟನಾಕಾರರು ತಮ್ಮ 'ನಬನ್ನ ಅಭಿಜಾನ್' ಅಂಗವಾಗಿ ರಾಜ್ಯ ಸಚಿವಾಲಯದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹೊಸ ಘರ್ಷಣೆಗಳು ಸಂಭವಿಸಿದವು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಮುಂದಾದಾಗ ಘರ್ಷಣೆ ಆರಂಭವಾಗಿದೆ.
ಈ ವೇಳೆ ಆಕ್ರೋಶಿತ ಪ್ರತಿಭಟನಾಕಾರು ಭದ್ರತಾ ಪಡೆಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದು, ರಾಜ್ಯ ಸಚಿವಾಲಯದ ಮಾರ್ಗವನ್ನು ತಡೆಯುವ ಬ್ಯಾರಿಕೇಡ್‌ಗಳನ್ನು ಉರುಳಿಸಲು ಪ್ರಯತ್ನಿಸಿದರು. ಅವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿ ಮತ್ತು ಅಶ್ರುವಾಯು ಬಳಸಿದರು.
ಈ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೂಡ ಗಾಯಗೊಂಡಿದ್ದು, ಹೌರಾ ಪೊಲೀಸ್ ಕಮಿಷನರೇಟ್‌ನ ಚಂಡಿತಾಲಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.
ಹೇಸ್ಟಿಂಗ್ಸ್ ಮತ್ತು ಎಂಜಿ ರೋಡ್‌ನಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪೊಲೀಸರ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ
ಇನ್ನು ಶಾಂತಿಯುತವಾಗಿ ಸಾಗಿದ್ದ ಪ್ರತಿಭಟನೆಯಲ್ಲಿ ಪೊಲೀಸರೇ ಮಧ್ಯ ಪ್ರವೇಶಿಸಿ ನಮ್ಮನ್ನು ತಡೆದು ಹೊಡೆದಿದ್ದಾರೆ. ನಮ್ಮನ್ನು ಪೊಲೀಸರು ಏಕೆ ಹೊಡೆದರು? ನಾವು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಮೃತ ವೈದ್ಯರ ನ್ಯಾಯಕ್ಕಾಗಿ ನಾವು ಶಾಂತಿಯುತ ರ್ಯಾಲಿ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಣೆಗಾರಿಕೆ ವಹಿಸಿ ರಾಜೀನಾಮೆ ನೀಡಬೇಕು" ಎಂದು ಮಹಿಳಾ ಪ್ರತಿಭಟನಾಕಾರರು ಆಗ್ರಹಿಸಿದರು.
‘ಬ್ಯಾರಿಕೇಡ್‌ಗಳನ್ನು ಭೇದಿಸಿ ಭದ್ರತಾ ಸಿಬ್ಬಂದಿಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಲು ಯತ್ನಿಸಿದ್ದಾರೆ. ಹೀಗಾಗಿ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಬೇಕಾಯಿತು’ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.
Advertisement