ಅಹಮದಾಬಾದ್: ಗುಜರಾತ್‌ನ ವಿವಿಧ ಭಾಗಗಳಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ಭಾರೀ ಮಳೆಯಾಗುತ್ತಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯ ನಡುವೆ ಅಣೆಕಟ್ಟುಗಳು ಮತ್ತು ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ ಕಾರಣ 6,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಸೋಮವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಾಂಧಿನಗರ, ಖೇಡಾ ಮತ್ತು ವಡೋದರಾ ಜಿಲ್ಲೆಗಳಲ್ಲಿ ಗೋಡೆ ಕುಸಿದ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದರೆ. ಆನಂದ್ ಜಿಲ್ಲೆಯಲ್ಲಿ ಮರವೊಂದು ಬಿದ್ದು ಒಬ್ಬ ವ್ಯಕ್ತಿ ಮತ್ತು ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಅವರು ತಿಳಿಸಿದ್ದಾರೆ.
ಪಂಚಮಹಲ್, ನವಸಾರಿ, ವಲ್ಸಾದ್, ವಡೋದರಾ, ಭರೂಚ್, ಖೇಡಾ, ಗಾಂಧಿನಗರ, ಬೊಟಾಡ್ ಮತ್ತು ಅರಾವಳಿ ಜಿಲ್ಲೆಗಳ ಆಡಳಿತವು ನದಿಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಿದ ಕಾರಣ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಪಂಚಮಹಲ್ ಜಿಲ್ಲಾಡಳಿತವು ಸುಮಾರು 2,000 ಜನರನ್ನು ಸ್ಥಳಾಂತರಿಸಿದರೆ, ವಡೋದರಾದಲ್ಲಿ 1,000, ನವಸಾರಿಯಲ್ಲಿ 1,200 ಮತ್ತು ವಲ್ಸಾದ್‌ನಲ್ಲಿ 800 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement