ಇಟಾನಗರ: ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಸೇನಾ ಟ್ರಕ್ ಉರುಳಿದ ಪರಿಣಾಮ ಮೂವರು ಸೇನಾಧಿಕಾರಿಗಳು ಮೃತಪಟ್ಟು, ನಾಲ್ವರ ಗಾಯಗೊಂಡಿರುವ ಘಟನೆ ಅರುಣಾಚಲಪ್ರದೇಶದ ಸುಬಾನ್ಸಿರಿ ಜಿಲ್ಲೆಯಲ್ಲಿ ನಡೆದಿದೆ.
ತಾಪಿ ಗ್ರಾಮದ ಬಳಿಯ ಟ್ರಾನ್ಸ್ ಅರುಣಾಚಲ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಹವಾಲ್ದಾರ್ ಮಖತ್ ಸಿಂಗ್, ನಾಯ್ಕ್ ಮುಖೇಶ್ ಕುಮಾರ್, ಗ್ರೆನೇಡಿಯರ್ ಆಶಿಶ್ ಕುಮಾರ್ ಎಂದು ಗುರುತಿಸಲಾಗಿದೆ.
ಅಪಘಾತಕ್ಕೀಡಾದ ಸೇನಾ ಟ್ರಕ್ ಸಿಬ್ಬಂದಿಯನ್ನು ಸಾಗಿಸುವ ಬೆಂಗಾವಲು ಪಡೆಯ ಭಾಗವಾಗಿತ್ತು. ಟ್ರಕ್ ಸುಬಾನ್ಸಿರಿಯ ಜಿಲ್ಲಾ ಕೇಂದ್ರ ಪಟ್ಟಣವಾದ ದಪೋರಿಜೋದಿಂದ ಲೆಪರಾಡಾ ಜಿಲ್ಲೆಯ ಬಸರ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಮೃತದೇಹಗಳನ್ನು ಹೊರತೆಗೆಯಲು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವು ನೀಡಿದ್ದಾರೆ.
Advertisement