ಕೋಲ್ಕತ್ತಾ: ಆರ್ ಜಿ ಕಾರ್ ಆಸ್ಪತ್ರೆಯ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ರಾಜ್ಯ ಸಚಿವಾಲಯಕ್ಕೆ ನಡೆದ ಮೆರವಣಿಗೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರ ಕ್ರಮವನ್ನು ವಿರೋಧಿಸಿ ಬಿಜೆಪಿ ಕರೆ ನೀಡಿರುವ 12 ಗಂಟೆಗಳ ಬಂದ್‌ನಿಂದಾಗಿ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರಿದೆ.
ರಾಜ್ಯ ರಾಜಧಾನಿ ಕೋಲ್ಕತ್ತಾದಲ್ಲಿ, ಇಂದು ಬೆಳಗ್ಗೆ ರಸ್ತೆಗಳಲ್ಲಿನ ಕಡಿಮೆ ಸಂಖ್ಯೆಯ ಬಸ್‌ಗಳು, ಆಟೋ-ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಸಂಚರಿಸುತ್ತಿವೆ. ಮಾರುಕಟ್ಟೆಗಳು ಮತ್ತು ಅಂಗಡಿಗಳು ಎಂದಿನಂತೆ ತೆರೆದಿದ್ದರೂ ಸಹ, ಖಾಸಗಿ ವಾಹನಗಳ ಸಂಚಾರ ಗಣನೀಯವಾಗಿ ಕಡಿಮೆಯಾಗಿದೆ.
ಶಾಲೆಗಳು ಮತ್ತು ಕಾಲೇಜುಗಳು ತೆರೆದಿದ್ದವು, ಆದರೆ ಹೆಚ್ಚಿನ ಖಾಸಗಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆಯಿತ್ತು, ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಅನೇಕ ಸಂಸ್ಥೆಗಳು ಸೂಚಿಸಿವೆ.
ಬಿಜೆಪಿ ಕಾರ್ಯಕರ್ತರು ಉತ್ತರ 24 ಪರಗಣದ ಬೊಂಗಾವ್ ನಿಲ್ದಾಣ, ದಕ್ಷಿಣ 24 ಪರಗಣಗಳ ಗೋಚರಣ್ ನಿಲ್ದಾಣ ಮತ್ತು ಮುರ್ಷಿದಾಬಾದ್ ನಿಲ್ದಾಣದಲ್ಲಿ ಬಂದ್‌ಗೆ ಬೆಂಬಲ ಸೂಚಿಸಿದರು. ಬಿಜೆಪಿ ಬೆಂಬಲಿಗರು ಮತ್ತು ಟಿಎಂಸಿ ಕಾರ್ಯಕರ್ತರು ಮುಖಾಮುಖಿಯಾದ ಕಾರಣ ಉತ್ತರ 24 ಪರಗಣದ ಬ್ಯಾರಕ್‌ಪೋರ್ ನಿಲ್ದಾಣದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಹೂಗ್ಲಿ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ರೈಲಿಗೆ ಅಡ್ಡಿಪಡಿಸಿದರು.
ಪುರ್ಬಾ ಮೇದಿನಿಪುರ್ ಜಿಲ್ಲೆಯ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಧರಣಿ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ಮಾಲ್ಡಾದಲ್ಲಿ, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಕಾದಾಡುತ್ತಿದ್ದ ಗುಂಪುಗಳನ್ನು ಚದುರಿಸಲು ಪೊಲೀಸರು ಕ್ರಮಕೈಗೊಂಡರು. ಬಂಕುರಾ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಲಿಪುರ್‌ದವಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ‘ದಫಾ ಏಕ್ ದಾಬಿ ಏಕ್, ಮುಖ್ಯಮಂತ್ರಿರ್ ಪದತ್ಯಾಗ’ (ಒಂದೇ ಬೇಡಿಕೆ, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು) ಎಂಬ ಘೋಷಣೆಗಳನ್ನು ಕೂಗುತ್ತಾ ಆರ್ಟಿರಿಯಲ್ ರಸ್ತೆ ತಡೆಗೆ ಯತ್ನಿಸಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಆರ್‌ಜಿ ಕಾರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಒತ್ತಾಯಿಸಿ ನಿನ್ನೆ ಮಂಗಳವಾರ ನಡೆದ ‘ನಬಣ್ಣ ಅಭಿಜಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲಿನ ಪೊಲೀಸ್ ಕ್ರಮವನ್ನು ವಿರೋಧಿಸಿ ಬಿಜೆಪಿಯು ಇಂದು ಬೆಳಗ್ಗೆ 6 ಗಂಟೆಯಿಂದ ‘ಬಾಂಗ್ಲಾ ಬಂದ್’ಗೆ ಕರೆ ನೀಡಿದೆ.
ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಭಟ್ಪಾರಾದಲ್ಲಿ ಟಿಎಂಸಿ ಕಾರ್ಯಕರ್ತರು ತಮ್ಮ ಕಾರಿಗೆ ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ ಹೇಳಿದ್ದಾರೆ. ಆತನನ್ನು ಕೊಲ್ಲಲು ಟಿಎಂಸಿ ಮತ್ತು ಪೊಲೀಸರು ನಡೆಸಿದ ಸಂಚು ಎಂದು ಪಾಂಡೆ ಆರೋಪಿಸಿದ್ದಾರೆ.
ಇಂದು ನಾನು ನಮ್ಮ ನಾಯಕ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಹೋಗುತ್ತಿದ್ದೆವು. ಸ್ವಲ್ಪ ದೂರ ಹೋದಾಗ ಭಟ್ಪರಾ ಪುರಸಭೆಯಿಂದ ಜೆಟ್ಟಿಂಗ್ ಯಂತ್ರದಿಂದ ರಸ್ತೆಯನ್ನು ನಿರ್ಬಂಧಿಸಲಾಗಿದೆ. ನಮ್ಮ ಕಾರು ನಿಂತ ಕ್ಷಣ, ಸುಮಾರು 50-60 ಜನರು ವಾಹನವನ್ನು ಗುರಿಯಾಗಿಸಿಕೊಂಡರು. ನನ್ನ ವಾಹನದ ಮೇಲೆ 7 ರಿಂದ 8 ಬಾಂಬ್‌ಗಳನ್ನು ಎಸೆದರು ನಂತರ 6-7 ಸುತ್ತಿನ ಗುಂಡಿನ ದಾಳಿ ನಡೆಸಲಾಯಿತು. ಇದು ಟಿಎಂಸಿ ಮತ್ತು ಪೊಲೀಸರ ಜಂಟಿ ಪಿತೂರಿಯಾಗಿದೆ ಎಂದು ಪಾಂಡೆ ಹೇಳಿದರು.
ಪ್ರಿಯಾಂಗು ಪಾಂಡೆ ನಮ್ಮ ಪಕ್ಷದ ಕಾರ್ಯಕರ್ತ, ಅವರು ಇಲ್ಲಿಗೆ ಬರುತ್ತಿದ್ದರು. ಆಂಗ್ಲೋ-ಇಂಡಿಯನ್ ಸ್ಟಾಫ್ ಕ್ವಾರ್ಟರ್ಸ್ ಬಳಿ, ಜೆಟ್ಟಿಂಗ್ ಯಂತ್ರ ಇತ್ತು. ಅವರ ವಾಹನದ ಬಳಿ ಬರುತ್ತಿದ್ದಂತೆ, ಬಾಂಬ್ ಎಸೆಯಲಾಯಿತು. ನಂತರ, ಚಾಲಕನ ಮೇಲೆ ಗುಂಡು ಹಾರಿಸಲಾಯಿತು ಎಂದು ಬಿಜೆಪಿ ನಾಯಕ ಅರ್ಜುನ್ ಸಿಂಗ್ ಹೇಳಿದ್ದಾರೆ. ಘಟನೆಯಲ್ಲಿ ವಾಹನದ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Advertisement