ನವದೆಹಲಿ: ಕೇಂದ್ರ ಸರ್ಕಾರದ ಈ ಹಿಂದಿನ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ಬಗ್ಗೆ ಪಕ್ಷಕ್ಕೆ ಮುಜುಗರವಾಗುವ ರೀತಿ ಹೇಳಿಕೆ ನೀಡಿದ್ದ ಸಂಸದೆ ಕಂಗನಾ ರಣೌತ್ ಇಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಹೇಳಿಕೆ ನೀಡಿದ್ದ ನಂತರ 2ನೇ ಬಾರಿಗೆ ಜೆಪಿ ನಡ್ಡಾ ಅವರನ್ನು ಕಂಗನಾ ಭೇಟಿ ಮಾಡಿದ್ದಾರೆ.
ಮಂಡಿ ಸಂಸದರಾಗಿರುವ ಕಂಗನಾ, ಡೈಲಿ ದನಿಕ್ ನಲ್ಲಿ ಪ್ರಸಾರವಾಗಿದ್ದ ತಮ್ಮ ಸಂದರ್ಶನದ ತುಣುಕೊಂದನ್ನು ಸೋಮವಾರದಂದು ಹಂಚಿಕೊಂಡಿದ್ದರು. ಬಾಂಗ್ಲಾ ಮಾದರಿಯ ಪರಿಸ್ಥಿತಿ ಭಾರತದಲ್ಲಿ ಎದುರಾಗುತ್ತಿತ್ತು. ಆದರೆ ಇಲ್ಲಿ ಬಲಿಷ್ಠ ನಾಯಕತ್ವವಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
ಅಷ್ಟೇ ಅಲ್ಲದೇ ಚೀನಾ ಹಾಗೂ ಅಮೇರಿಕ ಪಿತೂರಿಯ ಬಗ್ಗೆಯೂ ಮಾತನಾಡಿದ್ದರು, ಕಂಗನಾ ಹೇಳಿಕೆಗಳಿಗೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕಂಗನಾ ಹೇಳಿಕೆಗಳ ಬೆನ್ನಲ್ಲೆ ಕ್ಷಿಪ್ರ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ, ಕಂಗನಾ ಅವರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ, ಪಕ್ಷದ ನೀತಿ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಆಕೆಗೆ ಅನುಮತಿ ಅಥವಾ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
"ಭವಿಷ್ಯದಲ್ಲಿ ಈ ರೀತಿಯ ಯಾವುದೇ ಹೇಳಿಕೆಯನ್ನು ನೀಡದಂತೆ ಭಾರತೀಯ ಜನತಾ ಪಕ್ಷವು ಕಂಗನಾ ರಣೌತ್ ಗೆ ನಿರ್ದೇಶನ ನೀಡಿದೆ" ಎಂದು ಆಡಳಿತ ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಾಮಾಜಿಕ ಸಾಮರಸ್ಯದ ತತ್ವಗಳನ್ನು ಅನುಸರಿಸಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ಪಕ್ಷ ತಿಳಿಸಿದೆ.
Advertisement