ಐಜ್ವಾಲ್: ಉದ್ಘಾಟನೆಗೆ ಸಿದ್ಧವಾಗಿದ್ದ ಮಿಜೋರಾಂ ಹೊಸ ರೈಲು ನಿಲ್ದಾಣ ಭೂ ಕುಸಿತಕ್ಕೆ ಸಿಲುಕಿ ಧ್ವಂಸಗೊಂಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಿಜೋರಾಂನಲ್ಲಿ ಕಳೆದೊಂದು ವಾರದಿಂದ ವ್ಯಾಪಕ ಮಳೆಯಾಗುತ್ತಿದ್ದು, ಭೂಕುಸಿತ ಪ್ರಕರಣಗಳು ದಾಖಲಾಗುತ್ತಿವೆ.
ಅಂತೆಯೇ ಮಿಜೋರಾಂನ ಕೌನ್‌ಪುಯಿಯಲ್ಲಿ ಹೊಸದಾಗಿ ನಿರ್ಮಿಸಲಾದ ರೈಲು ನಿಲ್ದಾಣವು ಕುಸಿದು ಬಿದ್ದಿದೆ. ರೈಲು ನಿಲ್ದಾಣದ ನೂತನ ಕಟ್ಟಡ ಭೂಕುಸಿತಕ್ಕೆ ಒಳಗಾಗಿ ಕುಸಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಭಾರೀ ಮಳೆ ಮುನ್ಸೂಚನೆ
ಇನ್ನು ಮುಂದಿನ ದಿನಗಳಲ್ಲಿ ಮಿಜೋರಾಂನಲ್ಲಿ ವ್ಯಾಪಕ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಿಜೋರಾಂನಲ್ಲಿ ಆಗಸ್ಟ್ 20 ರಿಂದ ಭಾರೀ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟು, ಭೂಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಮಾನ್ಸೂನ್ ತನ್ನ ಉತ್ತುಂಗ ಸ್ಥಿತಿಯಲ್ಲಿದ್ದು, ಇಂದು ಮಿಜೋರಾಂ ನಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸುರಿದ ಭಾರೀ ಮಳೆಯು ಈ ಪ್ರದೇಶದಲ್ಲಿ ವಿಶೇಷವಾಗಿ ಐಜ್ವಾಲ್ ಮತ್ತು ಲುಂಗ್ಲೇ ಜಿಲ್ಲೆಗಳಲ್ಲಿ ಗಮನಾರ್ಹ ಸಮಸ್ಯೆಗಳನ್ನು ಸೃಷ್ಟಿಸಿವೆ.
ಮುಂಜಾಗ್ರತಾ ಕ್ರಮವಾಗಿ ಮಿಜೋರಾಂನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಿಜೋರಾಂ ಸರ್ಕಾರವು ನಾಲ್ಕು ಜಿಲ್ಲೆಗಳಲ್ಲಿ ಅಂದರೆ ಐಜ್ವಾಲ್, ಲುಂಗ್ಲೇ, ಹ್ನಾಹ್ಥಿಯಲ್ ಮತ್ತು ಮಮಿತ್ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಐಜ್ವಾಲ್ ಮತ್ತು ಕೊಲಾಸಿಬ್ ಜಿಲ್ಲೆಗಳಲ್ಲಿ ಸತತ ಐದು ದಿನಗಳ ಕಾಲ ಮತ್ತು ದಕ್ಷಿಣ ಮಿಜೋರಾಂನ ಸಿಯಾಹಾ ಜಿಲ್ಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಇಲಾಖೆ ಪ್ರಕಾರ, ಈ ವರ್ಷದ ಮಾರ್ಚ್‌ನಿಂದ ರಾಜ್ಯಾದ್ಯಂತ ಭೂಕುಸಿತ ಮತ್ತು ಇತರ ನೈಸರ್ಗಿಕ ವಿಕೋಪಗಳಲ್ಲಿ ಕನಿಷ್ಠ 42 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Advertisement