
ನವದೆಹಲಿ: 200 ಕೋಟಿ ರೂ ಸುಲಿಗೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಗೆ ಕೊನೆಗೂ ಜಾಮೀನು ಮಂಜೂರಾಗಿದ್ದು, ಆದರೂ ಆತನ ಸೆರೆವಾಸ ಮಾತ್ರ ಮುಂದುವರೆಯಲಿದೆ.
ಹೌದು.. ಎಐಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್‌ಗೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ದೆ ಅವರಿದ್ದ ವಿಶೇಷ ಪೀಠವು ವಾದ-ಪ್ರತಿವಾದವನ್ನು ಆಲಿಸಿದ ಬಳಿಕ 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಅನ್ನು ಶ್ಯೂರಿಟಿಯಾಗಿರಿಸಿಕೊಂಡು ಜಾಮೀನು ಮಂಜೂರು ಮಾಡಿದ್ದಾರೆ.
ಎಐಎಡಿಎಂಕೆ ಪಕ್ಷದ ಚಿಹ್ನೆಯನ್ನು ವಿ.ಕೆ. ಶಶಿಕಲಾ ಅವರ ಬಣಕ್ಕೆ ಕೊಡಿಸುವ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಯೊಬ್ಬರಿಗೆ ಲಂಚ ಆಮಿಷ ಒಡ್ಡಲಾಗಿತ್ತು. ಈ ವಿಚಾರವಾಗಿ ಸುಖೇಶ್ ಮಧ್ಯಸ್ಥಿಕೆ ವಹಿಸಿದ್ದ ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ಇದೀಗ ಸುಕೇಶ್ ಗೆ ಜಾಮೀನು ಮಂಜೂರಾಗಿದೆ.
ಸೆರೆವಾಸ ಮುಂದುವರಿಕೆ
ಬೇಲ್ ಸಿಕ್ಕರೂ ಸದ್ಯಕ್ಕೆ ಸುಕೇಶ್ ಹೊರಬರುವುದಿಲ್ಲ. ಏಕೆಂದರೆ ಬೇರೆ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಅವುಗಳ ವಿಚಾರಣೆ ನಡೆದ ಬಳಿಕ ಸುಕೇಶ್ ಸೆರೆವಾಸ ಅಂತ್ಯದ ಭವಿಷ್ಯ ತಿಳಿಯಲಿದೆ.
Advertisement