ನವದೆಹಲಿ: ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ತಾವು ಪ್ರತಿನಿಧಿಸುತ್ತಿರುವ ರಾಜ್ಯದ ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದಾರೆ.
ಎನ್ ಡಿಟಿವಿ ಗೆ ಸಂದರ್ಶನ ನೀಡಿರುವ ಶಶಿ ತರೂರ್ #Mollywood MeToo ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಭಾರತೀಯ ಸಮಾಜದಲ್ಲಿ ಒಟ್ಟಾರೆ ವರ್ತನೆ ಬದಲಾಗಬೇಕೆಂದು ಹೇಳಿದ್ದಾರೆ.
ಮಹಿಳೆಯರ ಮೇಲಿನ ಹಿಂಸಾತ್ಮಕ ಅಪರಾಧಗಳನ್ನು ನಿಯಂತ್ರಿಸಿ, ನಿರ್ಮೂಲನೆ ಮಾಡದೇ ಇದ್ದಲ್ಲಿ, ಭಾರತೀಯ ಪುರುಷರಲ್ಲಿ ಬಹುದೊಡ್ಡ ಲೋಪವಿರುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ. ಮಹಿಳೆಯರು ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸುವ ಧೈರ್ಯ ತೋರುತ್ತಿರುವುದನ್ನು ಸ್ವಾಗತಿಸಿರುವ ಶಶಿ ತರೂರ್, ಭಾರತೀಯ ಸಮಾಜದಲ್ಲಿ ಅವನತಿ ಸರಿಪಡಿಸಬೇಕಾದರೆ ಲಿಂಗ ತಾರತಮ್ಯ ಹೋಗಲಾಡಿಸಲು ಹೋರಾಟ ನಡೆಯಬೇಕು ಎಂದಿದ್ದಾರೆ.
"ನಾನು ದಿನಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಪ್ರತಿ ದಿನವೂ ಕೆಲವು ಘಟನೆಗಳು ನಡೆದಿರುವ ಬಗ್ಗೆ ವರದಿಯಾಗುತ್ತದೆ. ಕೆಲವು ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿರುತ್ತದೆ. ಅದು ಕಾಲೇಜು ವಿದ್ಯಾರ್ಥಿ, ಮಗು ಅಥವಾ ಮಧ್ಯವಯಸ್ಕ ಮಹಿಳೆಯಾಗಿರಬಹುದು. ನಾವು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದಾದರೆ, ಭಾರತೀಯ ಪುರುಷರಲ್ಲೇ ಏನೋ ತಪ್ಪಿದೆ” ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
Advertisement