
ಸಿಧಿ: ಮಧ್ಯಪ್ರದೇಶದ ಸಿಧಿಯಲ್ಲಿ ಅತ್ತಿಗೆ ತನ್ನ ಬಾಮೈದನ ಖಾಸಗಿ ಅಂಗವನ್ನು ಕತ್ತರಿಸಿದ ಘಟನೆ ಇದೀಗ ಸಂಚಲನ ಮೂಡಿಸಿದೆ. ಘಟನೆಗೂ ಮೊದಲು ಬಾಮೈದನನ್ನು ಕೋಣೆಗೆ ಕರೆದ ಅತ್ತಿಗೆ ಈ ದುಷ್ಕೃತ್ಯ ಎಸೆಗಿದ್ದಾಳೆ.
ಯುವಕ ಕೋಣೆಗೆ ಹೋಗುತ್ತಿದ್ದಂತೆ ಮಹಿಳೆ ಆತನ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾಳೆ. ಯುವಕ ಕೋಣೆಯಲ್ಲೇ ಬಿದ್ದು ನೋವಿನಿಂದ ನರಳುತ್ತ ಜೋರಾಗಿ ಕೂಗಿಕೊಂಡಿದ್ದಾನೆ. ಕೂಡಲೇ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸಂತ್ರಸ್ತನ ದೂರಿನ ಮೇರೆಗೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸಿಧಿ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಕುಸ್ಮಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಜಮೀನಿನ ವಿಚಾರವಾಗಿ ಅತ್ತಿಗೆಯೊಂದಿಗೆ ಜಗಳ ನಡೆಯುತ್ತಿದೆ ಎಂದು ಬಾಮೈದ ಹೇಳಿದ್ದಾನೆ. ಪಿತೂರಿಯ ಭಾಗವಾಗಿ, ಆಕೆ ತನ್ನನ್ನು ಮನೆಗೆ ಕರೆದಿದ್ದಳು. ಕೋಣೆಗೆ ಹೋಗಿದ ಕೂಡಲೇ ಅತ್ತಿಗೆ ಹರಿತವಾದ ಆಯುಧದಿಂದ ತನ್ನ ಖಾಸಗಿ ಅಂಗಗಳನ್ನು ಕತ್ತರಿಸಿದ್ದು ರಕ್ತಸ್ರಾವವಾಯಿತು ಎಂದು ಯುವಕ ದೂರಿದ್ದಾನೆ.
ಸದ್ಯ ಯುವಕನ ಸ್ಥಿತಿ ಗಂಭೀರವಾಗಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Advertisement