
ಬಲ್ಲಿಯಾ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರಿಂದ 10 ಕೋಟಿ ರೂ. ಹಣದ ಬೇಡಿಕೆಯ ಕುರಿತು ಉತ್ತರ ಪ್ರದೇಶದ ಬಲ್ಲಿಯಾದ ನಗರ ಪಂಚಾಯತ್ ಮಾಜಿ ಅಧ್ಯಕ್ಷರು ನೀಡಿದ ದೂರಿನ ಆಧಾರದ ಮೇಲೆ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬೆಲ್ತಾರಾ ರಸ್ತೆ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಗುಪ್ತಾ ಅವರಿಗೆ ಹಣಕ್ಕಾಗಿ ಒತ್ತಾಯಿಸಿ ಪತ್ರ ಬಂದ ನಂತರ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಉಭಾನ್ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಈ ಸಂಬಂಧ ಬಿ ಎನ್‌ಎಸ್‌ನ ಸೆಕ್ಷನ್ 351 (4) (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಿಚಿತ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವಿಪಿನ್ ಸಿಂಗ್ ಹೇಳಿದರು.
ಪೊಲೀಸರು ದೂರನ್ನು ಸ್ವೀಕರಿಸಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಸ್ರಾ ವಲಯದ ಸರ್ಕಲ್ ಆಫೀಸರ್ (ಸಿಒ) ಮೊಹಮ್ಮದ್ ಫಾಹಿಮ್ ಖುರೇಷಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಅಂಚೆ ಸೇವೆಯ ಮೂಲಕ ಪತ್ರ ಬಂದಿತ್ತು. ಅದರಲ್ಲಿ ಬಿಷ್ಣೋಯಿ ಗ್ಯಾಂಗ್ ಎಂದು ಹೇಳಿಕೊಳ್ಳುವ ಯಾರೋ ವ್ಯಕ್ತಿ 10 ಕೋಟಿ ರೂ. ಹಣವನ್ನು ಪಾವತಿಸುವಂತೆ ಕೇಳಿದ್ದರು ಎಂದು ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು. ಗುಪ್ತಾ ಉದ್ಯಮಿಯಾಗಿದ್ದು, ಅವರ ಪತ್ನಿ ರೇಣು ಗುಪ್ತಾ ಪ್ರಸ್ತುತ ಬೆಲ್ತಾರ ರಸ್ತೆ ನಗರ ಪಂಚಾಯತ್ ಅಧ್ಯಕ್ಷರಾಗಿದ್ದಾರೆ.
Advertisement