ಮಹಾಯುತಿಯಲ್ಲಿ ಎನ್‌ಸಿಪಿ ಇಲ್ಲದಿದ್ದರೆ ನಾವು 90-100 ಸೀಟು ಗೆಲ್ಲುತ್ತಿದ್ದೇವೆ: ಶಿವಸೇನಾ ಶಾಸಕ
ಮುಂಬೈ: ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮಹಾಯುತಿ ಮೈತ್ರಿಕೂಟದ ಭಾಗವಾಗದಿದ್ದರೆ ನವೆಂಬರ್ 20 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷ 90-100 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಶಿವಸೇನಾ ಶಾಸಕ ಗುಲಾಬ್ರಾವ್ ಪಾಟೀಲ್ ಅವರು ಭಾನುವಾರ ಹೇಳಿದ್ದಾರೆ.
ಮಹಾಯುತಿ ಮೈತ್ರಿಕೂಟ ಭಾರತೀಯ ಜನತಾ ಪಕ್ಷ, ಶಿವಸೇನೆ ಮತ್ತು ಎನ್‌ಸಿಪಿಯನ್ನು ಒಳಗೊಂಡಿದೆ.
ಅಜಿತ್ ಪವಾರ್ ಅವರು ಕಳೆದ ವರ್ಷ ಜುಲೈನಲ್ಲಿ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಿಕೊಂಡರು ಮತ್ತು ಉಪ ಮುಖ್ಯಮಂತ್ರಿಯಾಗಿದ್ದರು.
"ನಾವು ಕೇವಲ 85 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೇವೆ. ಅಜಿತ್ ಪವಾರ್ ಅವರ ಎನ್ ಸಿಪಿ ಇಲ್ಲದಿದ್ದರೆ ನಾವು 90-100 ಸ್ಥಾನಗಳನ್ನು ಗೆಲ್ಲಬಹುದಿತ್ತು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಸರ್ಕಾರಕ್ಕೆ ಏಕೆ ಸೇರಿಸಲಾಯಿತು? ಎಂದು ಶಿಂಧೆ ಎಂದೂ ಕೇಳಲಿಲ್ಲ" ಎಂದು ಪಾಟೀಲ್ ಪ್ರಾದೇಶಿಕ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
ಇನ್ನು ಸರ್ಕಾರ ರಚನೆ ಕುರಿತು ಮಾತನಾಡಿದ ಪಾಟೀಲ್, ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಅಸಮಾಧಾನಗೊಂಡಿಲ್ಲ ಎಂದಿದ್ದಾರೆ.
ನವೆಂಬರ್ 23 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಹಾಯುತಿಯು 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ.