
ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿವಾದ ಹಾಗೂ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಇತ್ತೀಚಿಗೆ ಸಂಭವಿಸಿದ ಹಿಂಸಾಚಾರ, ಮತ್ತಿತರ ವಿಚಾರಗಳ ಚರ್ಚೆಗೆ ವಿರೋಧ ಪಕ್ಷಗಳು ಇಂದು ಕೂಡಾ ಪ್ರತಿಭಟನೆ ಮುಂದುವರೆಸಿದ್ದರಿಂದ ಗದ್ದಲ ಉಂಟಾಗಿ ಲೋಕಸಭೆ ಹಾಗೂ ರಾಜ್ಯಸಭೆಯನ್ನು ದಿನದ ಮಟ್ಟಿಗೆ ಸೋಮವಾರ ಮುಂದೂಡಲಾಯಿತು.
ವಾರಾಂತ್ಯದ ವಿರಾಮದ ಬಳಿಕ ಲೋಕಸಭೆ ಸಮಾವೇಶಗೊಳ್ಳುತ್ತಿದ್ದಂತೆಯೇ, ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳ ಸದಸ್ಯರು, ಲಂಚ ಪ್ರಕರಣದಲ್ಲಿ ಅಮೆರಿಕಾ ನ್ಯಾಯಾಲಯದಿಂದ ಉದ್ಯಮಿ ಗೌತಮ್ ಅದಾನಿಗೆ ಬಂಧನದ ವಾರೆಂಟ್ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದರು.
ಕೆಲ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ, ಮತ್ತೆ ಕೆಲವರು ಘೋಷಣೆ ಕೂಗಿ ಗದ್ದಲವನ್ನುಂಟು ಮಾಡಿದರು. ಪ್ರಶ್ನೋತರ ಅವಧಿಗೆ ಅವಕಾಶ ಮಾಡಿಕೊಡಿ ನಂತರ ಅವರು ಪ್ರಸ್ತಾಪಿಸಿದ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳುತ್ತಿದಾಗಿ ಸ್ಪೀಕರ್ ಓಂ ಬಿರ್ಲಾ ಪ್ರತಿಪಕ್ಷಗಳ ಸದಸ್ಯರಿಗೆ ಮನವಿ ಮಾಡಿದರು.
ಧರಣಿ ನಡುವೆ ಒಂದು ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ಸ್ಪೀಕರ್ ಮನವಿಯನ್ನು ನಿರ್ಲಕ್ಷಿಸಿದ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ, ಗದ್ದಲ ಮುಂದುವರೆಸಿದ್ದರಿಂದ ಕಲಾಪವನ್ನು 12 ಗಂಟೆಯವರೆಗೂ ಮುಂದೂಡಲಾಯಿತು. ಬಳಿಕ ಕಲಾಪ ಸಮಾವೇಶಗೊಂಡಾಗಲೂ ವಿಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದರಿಂದ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.
ಇದೇ ವಿಚಾರವಾಗಿ ಕಳೆದ ವಾರವೂ ಕಲಾಪವನ್ನು ಪ್ರತಿಭಟನೆ ನುಂಗಿಕೊಂಡಿತ್ತು. ಕಲಾಪ ಮುಂದೂಡಿಕೆ ಬಳಿಕ ಕಾಂಗ್ರೆಸ್ ನ ವೇಣುಗೋಪಾಲ್, ಡಿಎಂಕೆಯ ಬಾಲು, ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಜಿಯಾ ಉರ್ ರೆಹಮನ್ ಬಾರ್ಕ್ ಒಟ್ಟಿಗೆ ಸ್ಪೀಕರ್ ಕಚೇರಿಗೆ ತೆರಳುತ್ತಿರುವ ದೃಶ್ಯ ಕಂಡುಬಂದಿತು.
ಈ ಮಧ್ಯೆ ಅದಾನಿ ವಿವಾದ ಕುರಿತ ಚರ್ಚೆಗೆ ಅವಕಾಶ ಸೇರಿದಂತೆ ವಿಪಕ್ಷಗಳು ನಿಯಮ 267 ರ ಅಡಿಯಲ್ಲಿ ನೀಡಲಾಗಿದ್ದ 20 ನೋಟಿಸ್ ಗಳ ಚರ್ಚೆಗೆ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ನಿರಾಕರಿಸಿದರು. ಇಂದಿನ ಕಾರ್ಯ ಕಲಾಪದ ಪಟ್ಟಿಯಲ್ಲಿರುವ ವಿಚಾರಗಳ ಬಗ್ಗೆ ಮಾತ್ರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಧನ್ ಕರ್ ವಿಪಕ್ಷಗಳಿಗೆ ಹೇಳಿದರು. ಆದರೆ, ತಾವು ನೀಡಿರುವ ನೋಟಿಸ್ ಗಳ ಮೇಲಿನ ಚರ್ಚೆಗಾಗಿ ಪಟ್ಟಿಯಲ್ಲಿರುವ ವಿಚಾರಗಳನ್ನು ಬದಿಗೊತ್ತುವಂತೆ ವಿಪಕ್ಷಗಳು ಬಿಗಿಪಟ್ಟು ಹಿಡಿದವು.
ಸಂಸತ್ ಕಾರ್ಯ ಕಲಾಪಕ್ಕೆ ಅಡ್ಡಿಪಡಿಸದಂತೆ ಧನಕರ್ ಮಾತಿಗೆ ಕಿವಿಗೂಡದ ಕಾಂಗ್ರೆಸ್ ಸದಸ್ಯರು ಅದಾನಿ ವಿರುದ್ಧದ ಆರೋಪಗಳ ಕುರಿತು ಪ್ರತಿಭಟನೆ ನಡೆಸಿದರೆ, ಸಮಾಜವಾದಿ ಪಕ್ಷದ ಸದಸ್ಯರು ಸಂಭಾಲ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಲಾಪವನ್ನು ದಿನದ ಮಟ್ಟಿಗೆ ಧನಕರ್ ಮುಂದೂಡಿದರು.
Advertisement