
ವಿಶಾಖಪಟ್ಟಣ: ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ವಕ್ಫ್ ಬೋರ್ಡ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ ಎಂಬ ಸುದ್ದಿ ವೈರಲ್ ಆಗಿತ್ತು. ರಾಜ್ಯದಲ್ಲಿ ವಕ್ಫ್ ಬೋರ್ಡ್ ಅನ್ನು ನಿಷೇಧಿಸಲಾಗಿದೆ ಎಂದು ಹಲವರು ಹೇಳಿದ್ದರು.
ವಕ್ಫ್ ಬೋರ್ಡ್ ಕುರಿತು ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು ಅದು ನಿಜ ಅಂದರೆ, ಹಿಂದಿನ ಜಗನ್ ಮೋಹನ್ ಸರ್ಕಾರ ರಚಿಸಿದ್ದ ವಕ್ಫ್ ಮಂಡಳಿಯನ್ನು ಚಂದ್ರಬಾಬು ನಾಯ್ಡು ಸರ್ಕಾರ ವಿಸರ್ಜಿಸಿದೆ. ಆಂಧ್ರದ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್. ಮೊಹಮ್ಮದ್ ಫಾರೂಕ್ ಈ ಸಂಬಂಧ ಶನಿವಾರ ಆದೇಶ ಹೊರಡಿಸಿದ್ದಾಗಿ ತಿಳಿಸಿದ್ದರು. ಆಂಧ್ರಪ್ರದೇಶ ಸರ್ಕಾರ ಈಗ ಹೊಸ ವಕ್ಫ್ ಮಂಡಳಿಯನ್ನು ರಚಿಸಲಿದೆ. ಹೊಸ ಸರ್ಕಾರವು GO-75 ಅನ್ನು ಹೊರಡಿಸಿದ್ದು ಹಿಂದಿನ ಆಡಳಿತವು ಹೊರಡಿಸಿದ GO-47 ಅನ್ನು ರದ್ದುಗೊಳಿಸಿದೆ.
ನವೆಂಬರ್ 30ರ ಆದೇಶದಲ್ಲಿ ವೈಎಸ್‌ಆರ್‌ಸಿ ಆಡಳಿತದಿಂದ ರಚಿಸಲಾದ ಎಪಿ ಸ್ಟೇಟ್ ವಕ್ಫ್ ಬೋರ್ಡ್ ದೀರ್ಘಕಾಲದಿಂದ (ಮಾರ್ಚ್ 2023 ರಿಂದ) ನಿಷ್ಕ್ರಿಯವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆ ಸಮಯದಲ್ಲಿ ರಚನೆಯಾದ ವಕ್ಫ್ ಬೋರ್ಡ್ ಒಟ್ಟು 11 ಸದಸ್ಯರನ್ನು ಹೊಂದಿದ್ದು, ಅದರಲ್ಲಿ ಮೂವರು ಚುನಾಯಿತರಿದ್ದು ಉಳಿದ ಎಂಟು ಮಂದಿ ನಾಮನಿರ್ದೇಶನಗೊಂಡರು. ಗಮನಾರ್ಹವಾಗಿ, ಮಂಡಳಿಯನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್ 2023ರ ನವೆಂಬರ್ 1ರಂದು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರ ಚುನಾವಣೆಗೆ ತಡೆ ನೀಡಿತ್ತು.
ಹೀಗಾಗಿ ಹಿಂದಿನ ಸರ್ಕಾರ ರಚಿಸಿದ್ದ ಮಂಡಳಿಯನ್ನು ವಿಸರ್ಜಿಸಿ ಹೊಸ ಮಂಡಳಿ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಅಲ್ಲಿಗೆ ವಕ್ಫ್ ಬೋರ್ಡ್ ಅನ್ನೇ ಆಂಧ್ರ ಸರ್ಕಾರ ರದ್ದು ಮಾಡಿದೆ ಎಂಬುದು ಸುಳ್ಳು ಸುದ್ದಿ ಎಂಬುದು ಜಗಜ್ಜಾಹೀರಾಗಿದೆ.
Advertisement