
ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಡಿ.05 ರಿಂದ ಅಸ್ತಿತ್ವಕ್ಕೆ ಬರಲಿದ್ದು, ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪದಗ್ರಹಣ ಮಾಡುವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ.
ಡಿ.04 ರಂದು ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಹಂಗಾಮಿ ಸಿಎಂ ಏಕನಾಥ್ ಶಿಂಧೆ, ಎನ್ ಸಿಪಿ ನಾಯಕ ಅಜಿತ್ ಪವಾರ್ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ನಾವು ಮೂವರೂ ಸೇರಿ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಸರ್ಕಾರ ರಚನೆಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಎನ್ ಸಿಪಿಯ ಅಜಿತ್ ಪವಾರ್ ಕಾಲೆಳೆದಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಮಹಾಯುತಿ ಸರ್ಕಾರದಲ್ಲಿ ಯಾವು ಯಾವ ಹುದ್ದೆಯನ್ನು ನಿಭಾಯಿಸುತ್ತೀರಿ ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟನೆ ನೀಡದ ಏಕನಾಥ್ ಶಿಂಧೆ, ಪದಗ್ರಹಣಕ್ಕೆ ಇನ್ನೂ ಸಾಕಷ್ಟು ಸಮಯವಿದೆ ಎಂದಷ್ಟೇ ಹೇಳುವ ಮೂಲಕ ಕುತೂಹಲವನ್ನು ಜೀವಂತವಾಗಿಟ್ಟಿದ್ದಾರೆ.
ಯಾರು ಯಾವ ಪದವಿ ಹೊಂದಿರುತ್ತೀರಿ? ಎಂಬ ಪತ್ರಕರ್ತರ ಪ್ರಶ್ನೆಗೆ ಶಿಂಧೆ ಉತ್ತರಿಸುತ್ತಿದ್ದಾಗಲೇ ಮಧ್ಯಪ್ರವೇಶಿಸಿದ ಅಜಿತ್ ಪವಾರ್, "ನಾನು ಖಂಡಿತವಾಗಿಯೂ ಡಿಸಿಎಂ ಆಗಿ ಪದಗ್ರಹಣ ಮಾಡುತ್ತೇನೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು, ಇದಕ್ಕೆ ಅಷ್ಟೇ ಹಾಸ್ಯಭರಿತವಾಗಿ ಪ್ರತಿಕ್ರಿಯೆ ನೀಡಿದ ಏಕನಾಥ್ ಶಿಂಧೆ, ಅಜಿತ್ ದಾದಾ ಪವಾರ್ ಗೆ ಡಿಸಿಎಂ ಆಗಿ ಬೆಳಿಗ್ಗೆ ಹಾಗೂ ಸಂಜೆ ಪದಗ್ರಹಣ ಮಾಡಿದ ಅನುಭವವಿದೆ ಎಂದು ಕಾಲೆಳೆದಿದ್ದಾರೆ.
ಇದಕ್ಕೆ ನಗುತ್ತಲೇ ಉತ್ತರಿಸಿದ ಅಜಿತ್ ಪವಾರ್, ಕಳೆದ ಬಾರಿ ದೇವೇಂದ್ರ ಫಡ್ನವಿಸ್ ಜೊತೆ ಬೆಳ್ಳಂಬೆಳಿಗ್ಗೆ ಡಿಸಿಎಂ ಆಗಿ ಪದಗ್ರಹಣ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ಕಳೆದ ಬಾರಿ ಫಡ್ನವಿಸ್ ಜೊತೆ ಡಿಸಿಎಂ ಆಗಿ ಪದಗ್ರಹಣ ಮಾಡಿದಾಗ ಆ ಸರ್ಕಾರ ಹೆಚ್ಚು ಸಮಯ ಅಸ್ತಿತ್ವದಲ್ಲಿರಲಿಲ್ಲ. ಈ ಬಾರಿ ಫಡ್ನವಿಸ್ ಜೊತೆ ಡಿಸಿಎಂ ಆಗಿ 5 ವರ್ಷ ಪೂರೈಸುತ್ತೇವೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು
2019 ರಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರ ರಚನೆಯಾಗುವುದಕ್ಕೂ ಮೊದಲು, ದಿಢೀರ್ ಬೆಳವಣಿಗೆಯಲ್ಲಿ ಎನ್ ಸಿಪಿಯ ಅಜಿತ್ ಪವಾರ್ ಬೆಂಬಲ ಪಡೆದು ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಎನ್ ಸಿಪಿಯಿಂದ ಮ್ಯಾಜಿಕ್ ನಂಬರ್ ಗೆ ಅಗತ್ಯವಿದ್ದ ಶಾಸಕರ ಬೆಂಬಲ ಪಡೆಯುವಲ್ಲಿ ಅಜಿತ್ ಪವಾರ್ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಆ ಸರ್ಕಾರ 80 ಗಂಟೆಗಳಲ್ಲಿ ಉರುಳಿತ್ತು.
ತಮ್ಮನ್ನು ಸರ್ಕಾರದ ಭಾಗವಾಗಿರುವಂತೆ ಫಡ್ನವಿಸ್ ಮನವಿ ಮಾಡಿರುವುದನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿರುವ ಶಿಂಧೆ ಫಡ್ನವಿಸ್ ಗೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಬಳಿಕ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವುದಾಗಿ ಕುತೂಹಲವನ್ನು ಜೀವಂತವಾಗಿರಿಸಿದ್ದಾರೆ. ಮುಂಬೈ ನ ಆಜಾದ್ ಮೈದಾನದಲ್ಲಿ ಡಿ.05 ರಂದು ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
Advertisement