
ರಾಂಚಿ: ಜಾರಿ ನಿರ್ದೇಶನಾಲಯದ ಸಮನ್ಸ್‌ಗಳನ್ನು ಪಾಲಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ ಹೈಕೋರ್ಟ್ ಬುಧವಾರ ಬಿಗ್ ರಿಲೀಫ್ ನೀಡಿದ್ದು, ರಾಂಚಿಯ ಸಂಸದ/ಶಾಸಕ ನ್ಯಾಯಾಲಯದ ಮುಂದೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯ ಒಂದು ವಾರ ಕಾಲಾವಕಾಶ ನೀಡಿದೆ.
ಡಿಸೆಂಬರ್ 16 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಸೊರೆನ್ ಅವರಿಗೆ ಸಂಸದ/ಶಾಸಕ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.
ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಹಲವಾರು ಬಾರಿ ಸಮನ್ಸ್ ನೀಡಿದ್ದರೂ ಅವರು ಹಾಜರಾಗದ ಕಾರಣ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೊರೆನ್ ವಿರುದ್ಧ ಇಡಿ ದೂರು ನೀಡಿತ್ತು.
ಡಿಸೆಂಬರ್ 4 ರಂದು ಖುದ್ದು ರಾಂಚಿಯ ಸಂಸದ/ಶಾಸಕ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಜಾರ್ಖಂಡ್ ಸಿಎಂ ಸೊರೆನ್‌ಗೆ ಸೂಚಿಸಿತ್ತು.
ಆದರೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸೊರೆನ್ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು ಮತ್ತು ಅಧಿಕೃತ ಬದ್ಧತೆಗಳು ಹಾಗೂ ನಿಗದಿತ ಕಾರ್ಯಕ್ರಮಗಳಿಂದಾಗಿ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದರು.
ಅರ್ಜಿದಾರರಿಗೆ ಏಳು ಸಮನ್ಸ್ ನೀಡಿದ್ದರೂ ಅವರು ಹಾಜರಾಗಿಲ್ಲ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಇಡಿ ನ್ಯಾಯಾಲಯದ ಮುಂದೆ ವಾದ ಮಂಡಿಸಿತ್ತು. ಆದರೆ ಇಡಿ ವಾದ ತಳ್ಳಿಹಾಕಿದ ಹೈಕೋರ್ಟ್, ಸೊರೆನ್ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
Advertisement