
ಚಂಡೀಗಢ: ಇದು ಯುದ್ಧಪೀಡಿತ ಉಕ್ರೇನ್ ನಿಂದ ಸ್ವದೇಶಕ್ಕೆ ಮರಳಿದ ಉತ್ತರ ಪ್ರದೇಶ ಮೂಲದ ಯುವಕನ ಕಥೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಎಂಟು ತಿಂಗಳ ಕಾಲ ರಷ್ಯಾ ಸೇನೆಯ ಪರ ಸೇವೆ ಸಲ್ಲಿಸಿದ ಉತ್ತರ ಪ್ರದೇಶ ಮೂಲದ ರಾಕೇಶ್ ಯಾದವ್ ಭಾರತಕ್ಕೆ ಮರಳಿದ್ದಾರೆ. ಭಾರತದ 25 ಮಂದಿ ಯುವಕರು ಇನ್ನೂ ಯುದ್ಧದಲ್ಲಿ ಸಿಲುಕಿದ್ದಾರೆ ಎಂಬ ವಿಷಯವನ್ನು ಹೇಳಿದ್ದಾರೆ.
ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ತಮ್ಮ ಸಹಚರರೊಬ್ಬರು ಮೃತಪಟ್ಟಿದ್ದಾರೆ ಎಂಬ ದುಃಖಕರ ವಿಷಯವನ್ನು ಕೂಡ ಹೇಳಿದ್ದಾರೆ. ನಾನು ಡ್ರೋನ್ ನ್ನು ನೋಡಿದ ತಕ್ಷಣ ಅಲ್ಲಿ ನಿರ್ಮಿಸಲಾಗಿದ್ದ ಬಂಕರ್‌ಗೆ ಹಾರಿದ್ದರಿಂದ ನನ್ನ ಜೀವ ಉಳಿಯಿತು ಎಂದಿದ್ದಾರೆ.
ಇದೇ ರೀತಿ ಮತ್ತೊಂದು ಘಟನೆಯನ್ನು ಉಲ್ಲೇಖಿಸಿದ ಅವರು, ಜೂನ್ 17 ರಂದು ತಮ್ಮ ಸಹೋದ್ಯೋಗಿಯೊಬ್ಬರು ಗ್ರೆನೇಡ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ಆದರೆ ರಷ್ಯಾ ಅಧಿಕಾರಿಗಳು ಆರು ತಿಂಗಳ ನಂತರ ಅವರ ಸಾವಿನ ಸುದ್ದಿಯನ್ನು ಅವರ ಕುಟುಂಬಕ್ಕೆ ತಿಳಿಸಿದ್ದರು ಎಂಬ ಭಯಾನಕ ವಿಷಯವನ್ನು ಹೇಳುತ್ತಾರೆ.
ತಾವು ಪಟ್ಟ ಕಷ್ಟವನ್ನು ಹೀಗೆ ವಿವರಿಸಿದ್ದಾರೆ.:''ರಷ್ಯಾದಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಕೊಡುತ್ತೇನೆಂದು ಹೇಳಿ ನಂಬಿಸಿ ಎಂಟು ತಿಂಗಳ ಹಿಂದೆ ಟ್ರಾವೆಲ್ ಏಜೆಂಟ್ ನಾನು ಹಾಗೂ ಇತರ ಐವರನ್ನು ಕರೆದೊಯ್ದಿದ್ದನು. ರಷ್ಯಾಕ್ಕೆ ಹೋದ ಮೇಲೆ ನಮ್ಮನ್ನು ಸೈನ್ಯಕ್ಕೆ ಬಲವಂತವಾಗಿ ನೇಮಿಸಲಾಯಿತು. ರಷ್ಯಾದ ಭಾಷೆಯಲ್ಲಿ ದಾಖಲೆಗೆ ಸಹಿ ಹಾಕಿಸಲಾಯಿತು. ನಾವು ನಿರಾಕರಿಸಿದಾಗ ಹೊಡೆಯಲು ಆರಂಭಿಸಿದರು. ಹದಿನೈದು ದಿನಗಳ ಶಸ್ತ್ರಾಸ್ತ್ರ ತರಬೇತಿ ನೀಡಿದ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸೇರಿಸಿದರು. ಅಲ್ಲಿನ ಬಾಂಬ್ ದಾಳಿಯಲ್ಲಿ ನನ್ನ ಕೈಗಳಿಗೆ ಗಾಯಗಳಾದವು.
ಅಯ್ಯೋ ನಮ್ಮ ಪರಿಸ್ಥಿತಿ ಏನಾಯ್ತು, ಇಲ್ಲಿಗೆ ಬಂದು ಎಲ್ಲವೂ ಮುಗಿಯಿತು ಎಂದು ಭಾಸವಾಗಿ ಅಳುತ್ತಾ ಕುಳಿತಿರುತ್ತಿದ್ದೆ. ಇನ್ನು ಮತ್ತೆ ಭಾರತಕ್ಕೆ ಹೋಗಲು ಸಾಧ್ಯವಿಲ್ಲವಲ್ಲಾ ಎಂದೆನಿಸುತ್ತಿತ್ತು. ಅಲ್ಲಿನ ಪರಿಸ್ಥಿತಿಗಳನ್ನು ನೋಡಿ, ಒಮ್ಮೆ ನನ್ನನ್ನು ನಾನೇ ಸಾಯಿಸಿಕೊಳ್ಳಲು ಸಹ ನೋಡಿದ್ದೆ. ಅಷ್ಟು ಅಪಾಯ ಪರಿಸ್ಥಿತಿ ಅಲ್ಲಿತ್ತು.
ಸೇನೆಯಲ್ಲಿನ ಕೂಲಿ ಹಾಗೂ ಗಾಯಗೊಂಡಿದ್ದರಿಂದ ಅಲ್ಲಿನ ಸರ್ಕಾರ ನೀಡಿದ್ದ ಮೊತ್ತ ಸೇರಿ ಸುಮಾರು 45 ಲಕ್ಷ ರೂಪಾಯಿಗಳನ್ನು ಏಜೆಂಟ್ ಬಲವಂತವಾಗಿ ನನ್ನ ಖಾತೆಯಿಂದ ಕಿತ್ತುಕೊಂಡಿದ್ದ. ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಯುವಕರಿಂದಲೂ ಆ ರೀತಿ ಮಾಡಿದ್ದ. ಏಜೆಂಟರು ನಮ್ಮ ಬ್ಯಾಂಕ್ ಖಾತೆ ತೆರೆದು ಖಾತೆಗಳ ಪಿನ್ ಕೋಡ್ ನ್ನು ತನ್ನ ಬಳಿ ಇಟ್ಟುಕೊಂಡಿದ್ದ. ನಮ್ಮ ಸಂಬಳ ಜಮಾ ಆದಾಗ ಭಾರತದಲ್ಲಿರುವ ನಮ್ಮ ಕುಟುಂಬಸ್ಥರಿಗೆ ವರ್ಗಾಯಿಸುತ್ತೇನೆಂದು ಹೇಳಿ ನಂಬಿಸಿ ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಎಂದು ಭಯಾನಕ ಪರಿಸ್ಥಿತಿಯನ್ನು ವಿವರಿಸಿದರು.
ಉತ್ತರ ಪ್ರದೇಶದ ಅಜಂಗಢ್‌ಗೆ ಸೇರಿದ ಯಾದವ್ ನಿನ್ನೆ ಭಾನುವಾರ ರಷ್ಯಾದಿಂದ ವಾಪಸ್ಸಾಗಿದ್ದಾರೆ. ಪಂಜಾಬ್‌ನ ಕಪುರ್ತಲಾ ಬಳಿಯ ಸುಲ್ತಾನ್‌ಪುರ ಲೋಧಿಯನ್ನು ತಲುಪಿದ ಅವರ ರಕ್ಷಣೆಯಲ್ಲಿ ರಾಜ್ಯಸಭೆಯ ಎಎಪಿ ಸಂಸದ ಸಂತ ಬಲ್ಬೀರ್ ಸಿಂಗ್ ಸೀಚೆವಾಲ್ ಸಹಾಯ ಮಾಡಿದ್ದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪಂಜಾಬ್, ಮಹಾರಾಷ್ಟ್ರ, ಜಮ್ಮು -ಕಾಶ್ಮೀರ ಮತ್ತು ಉತ್ತರ ಪ್ರದೇಶದ ಇತರ ಐದು ಕುಟುಂಬಗಳು ಅವರ ಜೊತೆಗಿದ್ದರು. ಈ ಕುಟುಂಬಗಳು ಸೀಚೆವಾಲ್‌ಗೆ ಪತ್ರ ಬರೆದು ರಷ್ಯಾದ ಸೈನ್ಯದಲ್ಲಿ ಸಿಕ್ಕಿಬಿದ್ದ ತಮ್ಮ ಮಕ್ಕಳನ್ನು ರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದರು.
ಪಂಜಾಬ್‌ನಿಂದ ರಷ್ಯಾ ಸೇನೆಯಲ್ಲಿ ಸಿಕ್ಕಿಬಿದ್ದ ವಿಶೇಷ ಚೇತನ ಮನದೀಪ್ ಸಿಂಗ್ ಅವರ ಸಹೋದರ ಜಗದೀಪ್ ಸಿಂಗ್ ಅವರು ಮಾರ್ಚ್ 3 ರಿಂದ ಮನದೀಪ್ ಅವರೊಂದಿಗೆ ಮಾತನಾಡಿರಲಿಲ್ಲ. ಗ್ರೆನೇಡ್ ಸ್ಫೋಟದಲ್ಲಿ ಕನ್ಹಯ್ಯಾ ಮತ್ತು ದೀಪಕ್ ಯುದ್ಧಭೂಮಿಯಲ್ಲಿ ಗಾಯಗೊಂಡಿದ್ದರು. ಜೂನ್ ನಂತರ ಅವರೊಂದಿಗೆ ಮಾತನಾಡಿಲ್ಲ ಎಂದು ಉತ್ತರ ಪ್ರದೇಶದಿಂದ ಬಂದ ಕನ್ಹಯ್ಯಾ ಕುಮಾರ್ ಮತ್ತು ದೀಪಕ್ ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರಿಗೆ ಧನ್ಯವಾದ ಅರ್ಪಿಸಿದ ಸೀಚೆವಾಲ್, ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಕಾರದೊಂದಿಗೆ ಅವರು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮರಳಿದರು. ಸಿಕ್ಕಿಬಿದ್ದಿರುವ ಭಾರತೀಯ ಯುವಕರನ್ನು ಆದಷ್ಟು ಬೇಗ ವಾಪಸ್ ಕರೆತರಬೇಕು, ಕುಕೃತ್ಯದಲ್ಲಿ ಭಾಗಿಯಾಗಿರುವ ಏಜೆಂಟರ ವಿರುದ್ಧ ಕಠಿಣ ಕ್ರಮ ಕೈಗೊಂಡು ಯುವಕರನ್ನು ರಕ್ಷಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
Advertisement