
ಭೋಪಾಲ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಉದ್ಯಮಿ ಮತ್ತು ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ನಂತರ ಪತ್ತೆಯಾಗಿರುವ ಸೂಸೈಡ್ ನೋಟ್ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸೂಸೈಡ್ ನೋಟ್‌ನಲ್ಲಿ, ಉದ್ಯಮಿ ಮನೋಜ್ ಪರ್ಮಾರ್ ಅವರು, ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಮತ್ತು ಬಿಜೆಪಿ ನಾಯಕರ ಕಿರುಕುಳದಿಂದ ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ ಎಂದು ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.
ಪರ್ಮಾರ್ ಮತ್ತು ಅವರ ಪತ್ನಿ ತಮ್ಮ ಪಕ್ಷದ ಬೆಂಬಲಿಗರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಅಲ್ಲದೆ ಅವರು ಕಾಂಗ್ರೆಸ್ ಬೆಂಬಲಿಗರಾಗಿದ್ದರಿಂದ ಇಡಿ ಅವರಿಗೆ ಕಿರುಕುಳ ನೀಡಿದೆ ಎಂದು ಆರೋಪಿಸಿದೆ.
ಗಾಂಧಿಯವರ 'ಭಾರತ್ ಜೋಡೋ (ನ್ಯಾಯ) ಯಾತ್ರೆ' ಸಂದರ್ಭದಲ್ಲಿ ಈ ದಂಪತಿಯ ಮಕ್ಕಳು ತಮ್ಮ ಹುಂಡಿಯ ಹಣವನ್ನು ಉಡುಗೊರೆಯಾಗಿ ನೀಡಿದ್ದರು.
ಪೊಲೀಸರಿಗೆ ಸಿಕ್ಕಿರುವ ಆತ್ಮಹತ್ಯೆ ಪತ್ರವು ಅರ್ಜಿಯ ರೂಪದಲ್ಲಿದೆ. ತನಿಖೆ ನಡೆಯುತ್ತಿರುವುದರಿಂದ ಆತ್ಮಹತ್ಯೆ ಪತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಉಪವಿಭಾಗಾಧಿಕಾರಿ(ಎಸ್‌ಡಿಒಪಿ) ಆಕಾಶ್ ಅಮಲ್ಕರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಸೂಸೈಡ್ ನೋಟ್ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರರನ್ನು ಉದ್ದೇಶಿಸಿ ಬರೆಯಲಾಗಿದೆ.
ಶುಕ್ರವಾರ ಬೆಳಗ್ಗೆ ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದ ತಮ್ಮ ಮನೆಯಲ್ಲಿ ಪರ್ಮಾರ್ ಮತ್ತು ಅವರ ಪತ್ನಿ ನೇಹಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಟೈಪ್ ಮಾಡಿ ಮುದ್ರಿಸಿದಂತೆ ಕಂಡುಬರುವ ಒಂದು ಪತ್ರದಲ್ಲಿ, ಪರ್ಮಾರ್ ಅವರು ತನ್ನ ಕುಟುಂಬವನ್ನು ನೋಡಿಕೊಳ್ಳುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಮತ್ತು ಇಡಿ ಅಧಿಕಾರಿಗಳ ಕಿರುಕುಳದಿಂದ ಪರ್ಮಾರ್ ತಮ್ಮ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಎಕ್ಸ್‌ನಲ್ಲಿನ ಪೋಸ್ಟ್ ಮಾಡಿದ್ದಾರೆ.
Advertisement