
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಮನೆಯೊಂದರಲ್ಲಿ ಬೆಂಕಿ ಹತ್ತಿ ಉಸಿರುಗಟ್ಟಿ ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಮೂರು ವರ್ಷದ ಮೊಮ್ಮಗ ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಇತರ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪ್ರಕಾರ, ಬೆಳಗಿನ ಜಾವ 2:30 ರ ಸುಮಾರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಅಲ್ಲಿನ ನಿವಾಸಿಗಳನ್ನು ರಕ್ಷಿಸಲು ಮುಂದಾದರು. ಮನೆಯಲ್ಲಿ ದಟ್ಟ ಹೊಗೆ ತುಂಬಿದ್ದರೂ ಮನೆಯವರೆಲ್ಲರೂ ನಿದ್ದೆಯಲ್ಲಿದ್ದ ಕಾರಣ ತಕ್ಷಣಕ್ಕೆ ಗೊತ್ತಾಗಲಿಲ್ಲ.
ಸಂತ್ರಸ್ತರನ್ನು ಕಥುವಾದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು (GMC) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು 81 ವರ್ಷದ ಮಾಜಿ ಉಪ ಎಸ್ಪಿ ಅವತಾರ್ ಕೃಷ್ಣ ರೈನಾ, ಅವರ ಮಗಳು ಬರ್ಖಾ ರೈನಾ (25), ಮಗ ತಕಾಶ್ (3), 17 ವರ್ಷದ ಗಂಗಾ ಭಗತ್, 15 ವರ್ಷದ ಡ್ಯಾನಿಶ್ ಭಗತ್ ಮತ್ತು 6 ವರ್ಷದ ಅದ್ವಿಕ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರು ಮತ್ತು ಚಿಕಿತ್ಸೆ ಪಡೆಯುತ್ತಿರುವವರು 61 ವರ್ಷದ ಸ್ವರ್ಣ (ಅವತಾರ್ ಕೃಷ್ಣ ರೈನಾ ಅವರ ಪತ್ನಿ), ನೀತು ದೇವಿ (40), ಅರುಣ್ ಕುಮಾರ್ (15), ಮತ್ತು 69 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ.
ಆಸ್ಪತ್ರೆಯ ಪ್ರಾಂಶುಪಾಲ ಡಾ.ಸುರೀಂದರ್ ಅತ್ರಿ, ಹತ್ತು ಜನರನ್ನು ಆಸ್ಪತ್ರೆಗೆ ಕರೆತರಲಾಗಿತ್ತು, ಅವರಲ್ಲಿ ಆರು ಮಂದಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಸಂತ್ರಸ್ತರು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾವುದೇ ಸುಟ್ಟ ಗಾಯಗಳು ವರದಿಯಾಗಿಲ್ಲ ಎಂದು ಹೇಳಿದರು.
ಇದೊಂದು ದುರದೃಷ್ಟಕರ ಘಟನೆ. ಇತ್ತೀಚೆಗಷ್ಟೇ ನಿವೃತ್ತರಾದ ನಮ್ಮ ಸಹಾಯಕ ಮೇಟ್ರನ್ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆಯು ಮಧ್ಯರಾತ್ರಿ 2 ರಿಂದ 3 ಗಂಟೆ ಮಧ್ಯೆ ಸಂಭವಿಸಿದೆ. ನಾನು ತಕ್ಷಣ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇನೆ ಎಂದು ವೈದ್ಯರು ತಿಳಿಸಿದರು.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Advertisement