
ಶಹಜಹಾನ್‌ಪುರ: ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಬರೇಲಿ-ಇಟಾವಾ ಹೆದ್ದಾರಿಯ ಬರ್ಖೇಡಾ ಜೈಪಾಲ್ ಕ್ರಾಸ್‌ರೋಡ್ ಬಳಿ ಈ ಅಪಘಾತ ಸಂಭವಿಸಿದ್ದು, ಬುಧವಾರ ತಡರಾತ್ರಿ ದೆಹಲಿಗೆ ತೆರಳುತ್ತಿದ್ದ ಎರ್ಟಿಗಾ ಕಾರು ಎದುರಿಗೆ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ರಾಜೇಶ್ ಎಸ್ ತಿಳಿಸಿದ್ದಾರೆ.
ಮೃತರನ್ನು ರಿಯಾಜುಲ್ ಅಲಿ(45), ಅಮ್ನಾ(42), ಗುಡಿಯಾ(9), ತಮನ್ನಾ 'ಅನು'(32), ಮತ್ತು ನೂರ್(6) ಎಂದು ಗುರುತಿಸಲಾಗಿದೆ.
ಶಹಜಹಾನ್‌ಪುರದ ಕಾಂತ್ ಪಟ್ಟಣದ ನಿವಾಸಿಯಾಗಿರುವ ರಿಯಾಜುಲ್ ದೆಹಲಿಯಲ್ಲಿ ಗಾರ್ಮೆಂಟ್ ವ್ಯಾಪಾರ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
"ಈ ಕುಟುಂಬವು ಬುಧವಾರ ರಾತ್ರಿ 10 ಗಂಟೆಗೆ ಮದುವೆಯಲ್ಲಿ ಭಾಗವಹಿಸಿದ ನಂತರ ದೆಹಲಿಗೆ ತೆರಳಿದ್ದರು. ಸ್ವಲ್ಪ ಸಮಯದ ನಂತರ ಅವರ ವಾಹನವು ಭೀಕರ ಅಪಘಾತಕ್ಕೀಡಾಗಿದೆ" ಎಂದು ಎಸ್ಪಿ ಹೇಳಿದ್ದಾರೆ.
ಟ್ರಕ್ ಚಾಲಕನನ್ನು ವಶಕ್ಕೆ ಪಡೆದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬವು ಎರಡು ದಿನಗಳ ಹಿಂದೆ ಮದುವೆಗೆಂದು ಶಹಜಹಾನ್‌ಪುರಕ್ಕೆ ಬಂದಿತ್ತು ಮತ್ತು ದೆಹಲಿಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ರಿಯಾಜುಲ್ ಅವರ ಚಿಕ್ಕಪ್ಪ ಶಂಶೇರ್ ಅಲಿ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Advertisement