
ಹೈದರಾಬಾದ್: ಪುಷ್ಪ 2 ಚಿತ್ರದ ಪ್ರದರ್ಶನ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ನಿವಾಸದ ಬಳಿ ಹೈಡ್ರಾಮಾ ನಡೆದಿದ್ದು, ಕೆಲವು ಅಪರಿಚಿತ ವ್ಯಕ್ತಿಗಳು ಮನೆ ಮೇಲೆ ಕಲ್ಲು ತೂರಾಟ ಮತ್ತು ಟೊಮೆಟೋ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಕಾಲ್ತುಳಿತ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹೈದರಾಬಾದ್ ನ ಜುಬಿಲಿ ಹಿಲ್ಸ್‌ನಲ್ಲಿರುವ ನಟ ಅಲ್ಲು ಅರ್ಜುನ್ ನಿವಾಸದ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆ ವೇಳೆ ನಟ ಅಲ್ಲು ಅರ್ಜುನ್ ವರ್ತಿಸಿದ ರೀತಿ ಸರಿಯಿಲ್ಲ ಎಂದು ಆರೋಪಿಸಿ ಒಯು ಜೆಎಸಿ (ಒಸ್ಮಾನಿಯಾ ವಿವಿ) ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲು ಅರ್ಜುನ್ ಮನೆಯತ್ತ ಧಾವಿಸುತ್ತಲೇ ಘೋಷಣೆಗಳನ್ನು ಕೂಗಿದ ಸದಸ್ಯರು ನೋಡ ನೋಡುತ್ತಲೇ ಮನೆ ಕಾಂಪೌಡ್ ಏರಿ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಚಾರಿತ್ರ್ಯ ಹರಣಕ್ಕೆ ಯತ್ನ ಎಂದಿದ್ದ ಅಲ್ಲು ಅರ್ಜುನ್
ಇನ್ನು ನಿನ್ನೆ ತೆಲಂಗಾಣ ವಿಧಾನಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ನಟ ಅಲ್ಲು ಅರ್ಜುನ್ ರೋಡ್ ಶೋವನ್ನು ಟೀಕಿಸಿದ್ದರು. ದುರಂತ ನಡೆದ ದಿನದಂದು ನಟ ಕಾಲ್ತುಳಿತದಿಂದ ಮಹಿಳೆ ಸಾವನ್ನಪ್ಪಿರುವ ವಿಚಾರ ತಿಳಿದರೂ ಥಿಯೇಟರ್ ನಲ್ಲೇ ಇದ್ದರು ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ್ದ ಅಲ್ಲು ಅರ್ಜುನ್ ನಾವು ಉದ್ದೇಶಪೂರ್ವಕವಾಗಿ ನಡೆದುಕೊಂಡಿಲ್ಲ. ಅದೊಂದು ದುರಾದೃಷ್ಟಕರ ಘಟನೆ.. ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದ್ದು ಚಾರಿತ್ರ್ಯ ಹರಣ ಮಾಡಲಾಗುತ್ತಿದೆ ಎಂದು ಹೇಳಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಈ ಸುದ್ದಿಗೋಷ್ಠಿ ಬೆನ್ನಲ್ಲೇ ನಟ ಅಲ್ಲು ಅರ್ಜುನ್ ತಮ್ಮ ನಾಯಕ ರೇವಂತ್ ರೆಡ್ಡಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಅಲ್ಲು ಅರ್ಜುನ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇಂದು ನಡೆದ ಅಲ್ಲು ಅರ್ಜುನ್ ಮನೆ ಮೇಲಿನ ದಾಳಿ ಕೂಡ ಕಾಂಗ್ರೆಸ್ ಕಾರ್ಯಕರ್ತರ ಪ್ರೇರಿತ ಎಂದು ಹೇಳಲಾಗುತ್ತಿದೆ. ಇದು ಮಾತ್ರವಲ್ಲದೇ ತೆಲಂಗಾಣದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ನಟ ಅಲ್ಲು ಅರ್ಜುನ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಹಲವರ ಬಂಧನ
ಇನ್ನು ಅಲ್ಲು ಅರ್ಜುನ್ ನಿವಾಸದ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬಿಲಿಹಿಲ್ಸ್ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಧರಣಿ ನಿರತ ವಿದ್ಯಾರ್ಥಿ ಸಂಘಟನೆ ಮುಖಂಡರನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
Advertisement