
ಹೈದರಾಬಾದ್: ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಅತ್ಯಂತ ಮುಖ್ಯವಾದುದು ಎಂಬುದನ್ನು ಚಿತ್ರರಂಗದ ಗಣ್ಯರು ಮತ್ತು ಇತರರು ಅರ್ಥಮಾಡಿಕೊಳ್ಳಬೇಕು ಹಾಗೂ ಅವರು ಅದರಂತೆ ನಡೆದುಕೊಳ್ಳಬೇಕು ಎಂದು ತೆಲಂಗಾಣ ಡಿಜಿಪಿ ಜಿತೇಂದರ್ ಭಾನುವಾರ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ 'ಪುಷ್ಪ 2' ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವಿಗೀಡಾದ ವಿಚಾರ ಮತ್ತು ತೆಲುಗು ನಟ ಅಲ್ಲು ಅರ್ಜುನ್ ಅವರ ಕೆಲವು ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಪೊಲೀಸರಿಗೆ ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದೇ ಸಮಯದಲ್ಲಿ, ರಾಜ್ಯದ ನಾಗರಿಕರಿಗೆ ಎಲ್ಲರೂ ಜವಾಬ್ದಾರರಾಗಿರಬೇಕು ಎಂದು ಅವರು ಹೇಳಿದರು.
'ಅವರು ಚಲನಚಿತ್ರಗಳಲ್ಲಿ ಹೀರೋಗಳು. ಆದರೆ, ಅವರು ಸಮಾಜದಲ್ಲಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಸಿನಿಮಾ ಪ್ರಚಾರವು ನಾಗರಿಕರ ಸುರಕ್ಷತೆಗಿಂತಲೂ ಮುಖ್ಯವಲ್ಲ. ಏನೋ ತಪ್ಪಾಗಿದೆ. ಅಂತಹ ಘಟನೆಗಳು ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಒಳ್ಳೆಯದಲ್ಲ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು' ಎಂದು ಅವರು ಕರೀಂನಗರ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈ ತಿಂಗಳ ಆರಂಭದಲ್ಲಿ ಇಲ್ಲಿನ ಚಿತ್ರಮಂದಿರಗಲ್ಲಿ 'ಪುಷ್ಪ 2' ಚಿತ್ರದ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರೆ, ಅವರ ಎಂಟು ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ವೇಳೆ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Advertisement