
ನವದೆಹಲಿ: ಕೆನಡಾ ಗಡಿಯಿಂದ ಅಮೆರಿಕಕ್ಕೆ ಭಾರತೀಯರ ಕಳ್ಳಸಾಗಣಿಕೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಕೆನಡಾದ ಕೆಲವು ಕಾಲೇಜುಗಳು ಮತ್ತು ಕೆಲವು ಭಾರತೀಯ ಘಟಕಗಳು ಭಾಗಿಯಾಗಿರುವ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಗುಜರಾತ್‌ನ ದಿಂಗುಚಾ ಗ್ರಾಮದ ಭಾರತೀಯ ಕುಟುಂಬದ ನಾಲ್ಕು ಸದಸ್ಯರ ಸಾವಿನೊಂದಿಗೆ ತನಿಖೆ ಆರಂಭವಾಗಿದೆ. ಜನವರಿ 19, 2022 ರಂದು ಕೆನಡಾ-ಯುಎಸ್ ಗಡಿಯನ್ನು ಅಕ್ರಮವಾಗಿ ದಾಟಲು ಪ್ರಯತ್ನಿಸುತ್ತಿದ್ದಾಗ ನಾಲ್ವರು ತೀವ್ರ ಚಳಿಯಿಂದ ಸಾವನ್ನಪ್ಪಿದ್ದರು.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭವೇಶ್ ಅಶೋಕ್ ಭಾಯ್ ಪಟೇಲ್ ಮತ್ತು ಇತರರ ವಿರುದ್ಧ ಅಹಮದಾಬಾದ್ ಪೋಲೀಸ್ ಎಫ್‌ಐಆರ್‌ನಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸುವಂತೆ ಇಡಿ ತಿಳಿಸಿದೆ.
ಪಟೇಲ್ ಮತ್ತು ಇತರರು ಕಾನೂನುಬಾಹಿರ ಮಾರ್ಗಗಳ ಮೂಲಕ ಕೆನಡಾದ ಮೂಲಕ ಭಾರತೀಯರನ್ನು ಅಮೆರಿಕಾಗೆ ಕಳುಹಿಸಲು ಯೋಜಿತ ಸಂಚು ರೂಪಿಸಿದ್ದಾರೆ. ಮಾನವ ಕಳ್ಳಸಾಗಣೆಯ ಅಪರಾಧವನ್ನು ಮಾಡಿದ್ದಾರೆ ಎಂದು ಹೇಳಿದೆ.
ದಂಧೆಯ ಭಾಗವಾಗಿ, ಆರೋಪಿಗಳು ಕೆನಡಾ ಮೂಲದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕಾನೂನುಬಾಹಿರವಾಗಿ ಯುಎಸ್‌ಗೆ ಹೋಗಲು ಬಯಸುವ ಜನರಿಗೆ ಪ್ರವೇಶವನ್ನು ವ್ಯವಸ್ಥೆಗೊಳಿಸಿದ್ದರು ಎಂಬುದನ್ನು ಸಂಸ್ಥೆ ಪತ್ತೆ ಮಾಡಿದೆ.
ಅಂತಹ ಜನರಿಗೆ ಕೆನಡಾದ ವಿದ್ಯಾರ್ಥಿ ವೀಸಾವನ್ನು ಕೊಡಲಾಗಿದೆ. ಅವರು ಆ ದೇಶವನ್ನು ತಲುಪಿದ ನಂತರ, ಅವರು ಕಾಲೇಜಿಗೆ ಸೇರುವ ಬದಲು "ಅಕ್ರಮವಾಗಿ" ಯುಎಸ್-ಕೆನಡಾ ಗಡಿಯನ್ನು ದಾಟಿದ್ದಾರೆ, ಇದಾದ ನಂತರ ಕೆನಡಾ ಮೂಲದ ಕಾಲೇಜುಗಳು ಪಡೆದ ಶುಲ್ಕವನ್ನು ವ್ಯಕ್ತಿಗಳ ಖಾತೆಗೆ ಹಿಂತಿರುಗಿಸಿದೆ ಎಂದು ಇಡಿ ಆರೋಪಿಸಿದೆ.
ಇಡಿ ಪ್ರಕಾರ, ಭಾರತೀಯರನ್ನು ದಂಧೆಯಲ್ಲಿ ಪಾಲ್ಗೊಳ್ಳಲು ಪ್ರತಿ ವ್ಯಕ್ತಿಗೆ 55 ರಿಂದ 60 ಲಕ್ಷ ರೂ. "ಆಮಿಷ" ಒಡ್ಡಲಾಗಿದೆ. ಈ ಪ್ರಕರಣದಲ್ಲಿ ಡಿಸೆಂಬರ್ 10 ಮತ್ತು ಡಿಸೆಂಬರ್ 19 ರಂದು ಮುಂಬೈ, ನಾಗ್ಪುರ, ಗಾಂಧಿನಗರ ಮತ್ತು ವಡೋದರಾದ ಎಂಟು ಸ್ಥಳಗಳಲ್ಲಿ ಹೊಸ ಶೋಧ ಕೈಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
Advertisement