
ಜೈಪುರ: ದೇಶದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದ್ದು, 3 ವರ್ಷದ ಪುಟ್ಟ ಮಗುವೊಂದು 700 ಅಡಿ ಆಳದ ಬೋರ್ವೆಲ್ ಗೆ ಬಿದ್ದಿದೆ.
ರಾಜಸ್ತಾನದ ಕಿರಾತಪುರದ ಬದಿಯಾಲಿ ಧಾನಿಯಲ್ಲಿ ಈ ಘಟನೆ ನಡೆದಿದ್ದು, ಮೂರು ವರ್ಷದ ಚೇತನಾ ಎಂಬ ಬಾಲಕಿ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದಾಳೆ. ನೀರಿಲ್ಲದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೇ ಬಿಡಲಾಗಿತ್ತು. ಇದರ ಪಕ್ಕ ಗಿಡ ಗಂಟೆಗಳು, ಹುಲ್ಲುಗಳು ಬೆಳೆದು ಕೊಳವೆ ಬಾವಿಯ ಯಾವುದೇ ಗುರುತು ಇರಲಿಲ್ಲ.
ಇದೇ ಕೊಳವೆ ಬಾವಿ ಪಕ್ಕದಲ್ಲಿ ಮಗು ಚೇತನಾ ತನ್ನ ತಂದೆ ಜೊತೆ ಆಟವಾಡುತ್ತಿರುವಾಗ ಬಿದ್ದಿದ್ದಾಳೆ. ಬರೋಬ್ಬರಿ 150 ಅಡಿಯಿಂದ ಬಾಲಕಿ ತನ್ನನ್ನು ರಕ್ಷಿಸುವಂತೆ ಕೈಗಳನ್ನು ಮೇಲಕ್ಕೆತ್ತಿ ಅಂಗಲಾಚುತ್ತಿರುವ ದೃಶ್ಯ ಮನಕಲುಕುವಂತಿದ್ದು, ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ.
ಬಾಲಕಿ ಕೊಳವೆ ಬಾವಿಗೆ ಬೀಳುತ್ತಿದ್ದಂತೆ ತಂದೆ ಚೀರಾಡಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣವೆ ಸ್ಥಳೀಯರು ಧಾವಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸಮರೋಪಾದಿಯಲ್ಲಿ ಬಾಲಕಿ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಬರೊಬ್ಬರಿ 40 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾಡಳಿತ ಸ್ಥಳಕ್ಕೆ ಆಗಮಿಸಿದೆ.
ಕೊಳೆವೆ ಬಾವಿ ಅಡಿಯಲ್ಲಿ ಸಿಲುಕಿಕೊಂಡಿರುವ ಬಾಲಕಿಗೆ ಆಮ್ಲಜನ ಪೂರೈಕೆ ಮಾಡಲಾಗಿದೆ. ಇತ್ತ ಜೆಸಿಬಿ ಹಾಗೂ ಇತರ ಯಂತ್ರಗಳ ಮೂಲಕ ಮತ್ತೊಂದು ಬದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆ ಆರಂಭದಲ್ಲೇ ಆಮ್ಲಜನ ಜೊತೆಗೆ ಕ್ಯಾಮಾರ ಹಾಕಲಾಗಿದೆ. ಈ ಕ್ಯಾಮೆರಾದಲ್ಲಿ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳು ಸೆರೆಯಾಗಿದೆ.
ಕೈಗಳ ಮೂಲಕ ರಕ್ಷಣೆಗೆ ಅಂಗಲಾಚುತ್ತಿದ್ದಾಳೆ. ಆದರೆ ಈಗಾಗಲೇ ಕಾರ್ಯಾಚರಣೆ ಸುದೀರ್ಘ ಗಂಟೆ ತೆಗೆದುಕೊಂಡಿದೆ. ಇತ್ತ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಆದರೆ ಇದುವರೆಗೂ ಬಾಲಕಿ ರಕ್ಷಣೆ ಸಾಧ್ಯವಾಗಿಲ್ಲ.
ಹುಕ್ ಟೆಕ್ನಿಕ್ ಬಳಕೆ
ಇತ್ತ ಹುಕ್ ಟೆಕ್ನಿಕ್ ಮೂಲಕ ಬಾಲಕಿಯ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಹುಕ್ ಟೆಕ್ನಿಕ್ ಮೂಲಕ ಬಾಲಕಿಯ ರಕ್ಷಣೆಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ಬಾಲಕಿಯ ಪೋಷಕರಿಂದ ಅನುಮತಿ ಪಡೆದುಕೊಂಡಿದೆ. ಕಾರಣ ಈ ಕಾರ್ಯಾಚರಣೆಯಲ್ಲಿ ಬಾಲಕಿಗೆ ಗಾಯವಾಗುವ ಸಾಧ್ಯತೆ ಇದೆ. ಇದು ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳು ಇದೆ. ಹುಕ್ ಟೆಕ್ನಿಕ್ ಯಶಸ್ವಿಯಾದರೆ ಬಾಲಕಿಯನ್ನು ಹೊರತೆಗೆಯಲು ರಕ್ಷಣಾ ತಂಡಗಳಿಗೆ ಸಾಧ್ಯವಾಗಲಿದೆ. ಆದರೆ ಸ್ವಲ್ಪ ಯಾಮಾರಿದರರೂ ಬಾಲಕಿಯ ಜೀವನಕ್ಕೆ ಮತ್ತಷ್ಟು ಅಪಾಯವಾಗಲಿದೆ.
ಏನಿದು ಹುಕ್ ಟೆಕ್ನಿಕ್?
ಹುಕ್ ಟೆಕ್ನಿಕ್ ಮೂಲಕ ಬಾಲಕಿಯ ರಕ್ಷಣೆಗೆ ಅನುಮತಿ ನೀಡಿರುವ ಕಾರಣ ಈಗಾಗಲೇ ಈ ತಂತ್ರಜ್ಞಾನದ ಮೂಲಕ ಬಾಲಕಿಯ ರಕ್ಷಣೆಗೆ ಪ್ರಯತ್ನಗಳು ನಡೆಯುತ್ತಿದೆ. ಕೊಳವೆ ಬಾವಿಯೊಳಕ್ಕೆ ಕಬ್ಬಿಣದ ರಾಡ್ ಇಳಿಸಿ ಅದರಲ್ಲಿರುವ ಹುಕ್ ಮೂಲಕ ಬಾಲಕಿಯನ್ನು ಮೇಲಕ್ಕೆತ್ತುವ ವಿಧಾನವಾಗಿದೆ. ಇತ್ತ ಜೆಸಿಬಿ ಮೂಲಕ ಬಾಲಕಿ ಇರುವ ಅಡಿ ತಲುಪಲು ಕನಿಷ್ಠ 5 ದಿನಗಳ ಅವಶ್ಯಕತೆ ಇದೆ ಎಂದು ಹೇಳಲಾಗಿದೆ. ಬಾಲಕಿಯನ್ನು ಅದಷ್ಟು ಬೇಗ ರಕ್ಷಿಸಲು ಇದೀಗ ಹುಕ್ ಟೆಕ್ನಿಕ್ ಬಳಸಲಾಗುತ್ತಿದೆ. ಪೋಷಕರು ಮಗಳ ಸುರಕ್ಷಿತವಾಗಿ ಹೊರಬರಲು ಬೇಡುತ್ತಿದ್ದಾರೆ. ಕುಟುಂಬಸ್ಥರು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗುತ್ತದೆ.
Advertisement