
ನವದೆಹಲಿ: ನಿನ್ನೆ ನಿಧನರಾದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ನೆರೆಯ ರಾಷ್ಟ್ರಗಳಲ್ಲಿ ಸಂಬಂಧ ಸುಧಾರಣೆಗೆ ಸಕಾರಾತ್ಮಕ ಕೊಡುಗೆ ನೀಡಿದ್ದರು ಎಂದು ಚೀನಾ ಮತ್ತು ಪಾಕಿಸ್ತಾನ ದೇಶಗಳು ಸ್ಮರಿಸಿವೆ.
ಹೆಸರಾಂತ ಅರ್ಥಶಾಸ್ತ್ರಜ್ಞರಾಗಿದ್ದ ಮನ ಮೋಹನ್ ಸಿಂಗ್, ಭಾರತ-ಚೀನಾ ಸಂಬಂಧಗಳ ಅಭಿವೃದ್ಧಿಗೆ ಸಕಾರಾತ್ಮಕ ಕೊಡುಗೆ ನೀಡಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಉಭಯ ದೇಶಗಳ ನಡುವೆ ವಿವಾದಾತ್ಮಕ ಗಡಿ ಸಮಸ್ಯೆಯನ್ನು ಪರಿಹರಿಸಲು ಸಹಿ ಹಾಕಲಾದ ಶಿನೋ-ಇಂಡಿಯಾ ಒಪ್ಪಂದವನ್ನು ಅವರು ನೆನಪಿಸಿಕೊಂಡಿದ್ದಾರೆ. ಭಾರತ-ಚೀನಾ ಗಡಿ ವಿವಾದ ಕೊನೆಗಾಣಿಸಲು ಚೀನಾ ಮತ್ತು ಭಾರತವು ಶಾಂತಿ ಮತ್ತು ಸಮೃದ್ಧಿಗಾಗಿ ಕಾರ್ಯತಂತ್ರದ ಸಹಕಾರ ಪಾಲುದಾರಿಕೆಯನ್ನು ಘೋಷಿಸಿದ್ದವು ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ಮನಮೋಹನ್ ಸಿಂಗ್ ಅವರೊಂದಿನ ಒಡನಾಟವನ್ನು ನೆನಪಿಸಿಕೊಂಡಿರುವ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೊಹಮ್ಮದ್ ಕಸೂರಿ, ಇಡೀ ಸಾರ್ಕ್ ಪ್ರದೇಶದಲ್ಲಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿಸಿದ ಕೀರ್ತಿ ಸಿಂಗ್ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.
ಅಮೃತಸರದಲ್ಲಿ ಉಪಹಾರ, ಲಾಹೋರ್‌ನಲ್ಲಿ ಊಟ ಮತ್ತು ಕಾಬೂಲ್‌ನಲ್ಲಿ ರಾತ್ರಿಯ ಭೋಜನವನ್ನು ಹೊಂದಲು ಸಾಧ್ಯವಾಗುವ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂಬ ಸಿಂಗ್ ಅವರ ಹೇಳಿಕೆಯು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಜನರ ನಡುವಿನ ಸಂಪರ್ಕವು ಮಹತ್ತರವಾಗಿ ವೃದ್ಧಿಸಿತ್ತು. ಇದು ಜಮ್ಮು ಮತ್ತು ಕಾಶ್ಮೀರ ವಿವಾದ ಪರಿಹಾರಕ್ಕಾಗಿ ಸಂಭವನೀಯ ನಿಯಮಗಳ ನೀಲನಕ್ಷೆಯನ್ನು ತಯಾರಿಸಲು ಸಹ ಸಾಧ್ಯವಾಗಿಸಿತು ಎಂದು ಕಸೂರಿ ಹೇಳಿದರು.
ಕಸೂರಿ ನವೆಂಬರ್ 2002 ರಿಂದ ನವೆಂಬರ್ 2007ರವರೆಗೂ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪಾಕಿಸ್ತಾನದ ಪಂಜಾಬ್‌ನ ಚಕ್ವಾಲ್ ಜಿಲ್ಲೆಯಲ್ಲಿರುವ ತನ್ನ ಜನ್ಮ ಸ್ಥಳ ಗಾಹ್‌ಗೆ ಭೇಟಿ ನೀಡುವ ಬಯಕೆಯನ್ನು ಸಿಂಗ್ ವ್ಯಕ್ತಪಡಿಸಿದ್ದನ್ನು ಕಸೂರಿ ನೆನಪಿಸಿಕೊಂಡಿದ್ದಾರೆ.
Advertisement