
ನವದೆಹಲಿ: ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ ಅವರು 1991ರಲ್ಲಿ ಮಂಡಿಸಿದ್ದ ಬಜೆಟ್ ಮಹತ್ವದ ಮೈಲಿಗಲ್ಲು ಆಗಿತ್ತು. ರಾಷ್ಟ್ರವು ತನ್ನ ಕರಾಳ ಆರ್ಥಿಕ ಬಿಕ್ಕಟ್ಟಿನಿಂದ ಮೇಲೇರುವಂತೆ ಈ ಬಜೆಟ್ ಮಂಡಿಸಲು ಮನಮೋಹನ್ ಸಿಂಗ್ ಅವರು ಹಲವು ಕ್ಲಿಷ್ಟ ಸವಾಲುಗಳನ್ನು ಎದುರಿಸಬೇಕಾಗಿತ್ತು.
ಪಿ.ವಿ.ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಆ ಬಜೆಟ್ ನ್ನು ಬಹಳ ಸೂಕ್ಷ್ಮ ಸಮಯದಲ್ಲಿ ಮಂಡಿಸಿದ್ದರು. ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಎದುರಿಸುವುದರಿಂದ ಹಿಡಿದು ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ನಾಯಕರ ಅಸಮಾಧಾನ ಎದುರಿಸುವುದು ಅವರಿಗೆ ಸವಾಲಾಗಿತ್ತು.
ಮನಮೋಹನ್ ಸಿಂಗ್ ಅವರ ಐತಿಹಾಸಿಕ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ಪಾರುಮಾಡಿದ್ದು ಮಾತ್ರವಲ್ಲದೆ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸಿದೆ.
ಜುಲೈ 25, 1991 ರಂದು ಕೇಂದ್ರ ಬಜೆಟ್ ಮಂಡನೆಯಾದ ಒಂದು ದಿನದ ನಂತರ ಮನಮೋಹನ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಅನಿರೀಕ್ಷಿತ ಪ್ರಶ್ನೆ ಎದುರಿಸಿದರು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತಮ್ಮ ಪುಸ್ತಕ "ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ" ನಲ್ಲಿ 1991ನೇ ಇಸವಿ ಜೂನ್ ತಿಂಗಳಲ್ಲಿ ನರಸಿಂಹ ರಾವ್ ಪ್ರಧಾನಿಯಾದ ನಂತರ ನಡೆದ ಮಹತ್ತರ ಬದಲಾವಣೆಗಳನ್ನು ವಿವರಿಸಿದ್ದಾರೆ.
ಹಣಕಾಸು ಸಚಿವರು ತಮ್ಮ ಬಜೆಟ್ 'ಮಾನವೀಯ ಮುಖವುಳ್ಳ ಬಜೆಟ್' ಎಂದು ಕರೆದಿದ್ದಾರೆ. ಅವರು ರಸಗೊಬ್ಬರ, ಪೆಟ್ರೋಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಿಸುವ ಪ್ರಸ್ತಾಪಗಳನ್ನು ಸಮರ್ಥಿಸಿಕೊಂಡಿದ್ದರು ಎಂದು ಜೈರಾಂ ರಮೇಶ್ 2015 ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ವಿವರಿಸಿದರು.
ಜೈರಾಂ ರಮೇಶ ಅವರು ತಮ್ಮ ಅಧಿಕಾರದ ಆರಂಭದ ತಿಂಗಳುಗಳಲ್ಲಿ ನರಸಿಂಹ ರಾವ್ ಅವರ ಸಹಾಯಕರಾಗಿದ್ದರು. ಕಾಂಗ್ರೆಸ್ ಪಾಳೆಯದಲ್ಲಿನ ಅಸಮಾಧಾನವನ್ನು ಗ್ರಹಿಸಿದ ನರಸಿಂಹ ರಾವ್ ಅವರು ಆಗಸ್ಟ್ 1, 1991 ರಂದು ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಸಭೆಯನ್ನು ಕರೆದರು. ಪಕ್ಷದ ಸಂಸದರು ತಮ್ಮ ಅಭಿಪ್ರಾಯ ಮುಕ್ತವಾಗಿ ಹೊರಹಾಕಲು ಅವಕಾಶ ನೀಡಲು ನಿರ್ಧರಿಸಿದರು.
ಸಭೆಯಿಂದ ಪ್ರಧಾನಿ ನರಸಿಂಹ ರಾವ್ ದೂರ ಉಳಿದು ಮನಮೋಹನ್ ಸಿಂಗ್ ಅವರು ಪರಿಸ್ಥಿತಿ ಎದುರಿಸಲು ಬಿಟ್ಟರು ಎಂದು ಜೈರಾಂ ರಮೇಶ್ ಪುಸ್ತಕದಲ್ಲಿ ಬರೆದಿದ್ದಾರೆ, ಆಗಸ್ಟ್ 2 ಮತ್ತು 3 ರಂದು ಇನ್ನೂ ಎರಡು ಸಭೆಗಳು ನಡೆದವು, ಅದರಲ್ಲಿ ನರಸಿಂಹ ರಾವ್ ಅವರು ಉಪಸ್ಥಿತರಿದ್ದರು.
ಸಿಪಿಪಿ ಸಭೆಯಲ್ಲಿ ಕೇವಲ ಇಬ್ಬರು ಸಂಸದರು ಮಣಿಶಂಕರ್ ಅಯ್ಯರ್ ಮತ್ತು ನಾಥುರಾಮ್ ಮಿರ್ಧಾ ಅವರು ಮನಮೋಹನ್ ಸಿಂಗ್ ಅವರ ಬಜೆಟ್ ನ್ನು ಪೂರ್ಣ ಹೃದಯದಿಂದ ಬೆಂಬಲಿಸಿದರು.
ಪಕ್ಷದ ಒತ್ತಡಕ್ಕೆ ಮಣಿದ ಮನಮೋಹನ್ ಸಿಂಗ್, ರಸಗೊಬ್ಬರ ಬೆಲೆಯಲ್ಲಿನ ಶೇಕಡಾ 40 ರಷ್ಟು ಹೆಚ್ಚಳವನ್ನು ಶೇಕಡಾ 30 ಕ್ಕೆ ಇಳಿಸಲು ಒಪ್ಪಿಕೊಂಡರು ಆದರೆ ಎಲ್ಪಿಜಿ ಮತ್ತು ಪೆಟ್ರೋಲ್ ಬೆಲೆಗಳನ್ನು ಇಳಿಸಲಿಲ್ಲ.
ಮನಮೋಹನ್ ಸಿಂಗ್ ಅವರು ಆಗಸ್ಟ್ 6ರಂದು ಲೋಕಸಭೆಯಲ್ಲಿ ನೀಡಲಿರುವ ಹೇಳಿಕೆಯನ್ನು ನಿರ್ಧರಿಸಲು ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಆಗಸ್ಟ್ 4 ಮತ್ತು 5, 1991 ರಂದು ಎರಡು ಬಾರಿ ಸಭೆ ಸೇರಿತು. ಈ ಹೇಳಿಕೆಯು ಕಳೆದ ಕೆಲವು ದಿನಗಳಿಂದ ಬೇಡಿಕೆಯಿರುವ ರೋಲ್‌ಬ್ಯಾಕ್ ಕಲ್ಪನೆಯನ್ನು ಕೈಬಿಟ್ಟಿದೆ. ಆದರೆ ಈಗ ಸಣ್ಣ ಮತ್ತು ಅತಿಸಣ್ಣ ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಮಾತನಾಡಿದೆ ಎಂದು ಜೈರಾಂ ರಮೇಶ್ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.
Advertisement