
ಜೈಪುರ: ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮತ್ತೋರ್ವ ವ್ಯಕ್ತಿ ಶನಿವಾರ ಇಲ್ಲಿನ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿ ಸಾವಿಗೀಡಾಗಿರುವುದನ್ನು ದೃಢಪಡಿಸಿದ ಎಸ್‌ಎಂಎಸ್ ಆಸ್ಪತ್ರೆ ಅಧೀಕ್ಷಕ ಡಾ ಸುಶೀಲ್ ಭಾಟಿ, ಸದ್ಯ ಏಳು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಅಪಘಾತದಲ್ಲಿ ಪಾರಾದ ವ್ಯಕ್ತಿಯೊಬ್ಬರು ಮಾತನಾಡಿ, ಜೋರಾದ ಸ್ಫೋಟದ ಸದ್ದನ್ನು ಕೇಳಿದಾಗ ನಾವು ಕೆಲವು ಕಿಲೋಮೀಟರ್ ದೂರದಲ್ಲಿದ್ದೆವು. ಜ್ವಾಲೆಗಳು ಆಕಾಶದೆತ್ತರಕ್ಕೆ ಚಿಮ್ಮಿದವು ಮತ್ತು ಕ್ಷಣಗಳಲ್ಲಿಯೇ ನಮ್ಮ ಬಸ್ ಅನ್ನು ಬೆಂಕಿ ಆವರಿಸಿತು. ಜನರು ಕಿರುಚುತ್ತಿದ್ದರು ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಆದರೆ, ಬಾಗಿಲು ಲಾಕ್ ಆಗಿತ್ತು. ಆಗ ಸಂಪೂರ್ಣ ಗಾಬರಿಯಾಗಿತ್ತು' ಎಂದು ಅವರು ಹೇಳಿದರು.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಎಸ್‌ಎಂಎಸ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತನಾಡಿದ್ದರು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.
'ಜೈಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಅಪಘಾತದಲ್ಲಿ ಉಂಟಾದ ಸಾವುನೋವುಗಳ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ನಾನು ಎಸ್‌ಎಂಎಸ್ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯರಿಗೆ ತಕ್ಷಣ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ' ಎಂದು ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement