
ಚಂಡೀಗಢ: ಪಂಜಾಬ್ ಬಂದ್‌ನ ಅಂಗವಾಗಿ ಇಂದು ಸೋಮವಾರ ರಾಜ್ಯದ ಹಲವೆಡೆ ರೈತರು ರಸ್ತೆ ತಡೆ ನಡೆಸಿದ್ದರಿಂದ ಬೆಳಗ್ಗೆಯೇ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಕೇಂದ್ರ ಒಪ್ಪಿಕೊಳ್ಳದಿರುವುದನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕಳೆದ ವಾರ ಬಂದ್‌ಗೆ ಕರೆ ನೀಡಿದ್ದವು.
ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಬಂದ್ ಆಚರಣೆಯಲ್ಲಿರುತ್ತದೆ. ಧರೇರಿ ಜತ್ತನ್ ಟೋಲ್ ಪ್ಲಾಜಾದಲ್ಲಿ ರೈತರು ಧರಣಿ ನಡೆಸಿದ್ದರಿಂದ ಪಟಿಯಾಲ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಅಮೃತಸರದ ಗೋಲ್ಡನ್ ಗೇಟ್‌ನಲ್ಲಿ, ರೈತರು ನಗರದ ಪ್ರವೇಶ ಬಿಂದುವಿನ ಬಳಿ ಜಮಾಯಿಸಲು ಪ್ರಾರಂಭಿಸಿ, ಬಟಿಂಡಾದ ರಾಂಪುರ ಫುಲ್‌ನಲ್ಲಿ ರಸ್ತೆ ತಡೆ ನಡೆಸಿದರು.
ಸಂಪೂರ್ಣ ಬಂದ್ ಇದ್ದರೂ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ನಿನ್ನೆ ಹೇಳಿದ್ದರು. ಬೆಳಗ್ಗೆ 7 ರಿಂದ ಸಂಜೆ 4 ರವರೆಗೆ ಬಂದ್ ಆಚರಿಸಲಾಗುತ್ತದೆ. ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತವೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಅಥವಾ ಯಾರಾದರೂ ಉದ್ಯೋಗ ಸಂದರ್ಶನದಲ್ಲಿ ಭಾಗವಹಿಸಲು ಹೋಗುವವರು, ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಇತ್ಯಾದಿ ಅಗತ್ಯ ಇರುವವರಿಗೆ ಸಮಸ್ಯೆಯಾಗುವುದಿಲ್ಲ ಎಂದರು.
ಈ ಮಧ್ಯೆ, 70 ವರ್ಷ ವಯಸ್ಸಿನ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹ ಸೋಮವಾರ 35 ನೇ ದಿನಕ್ಕೆ ಕಾಲಿಟ್ಟಿದೆ. ದಲ್ಲೆವಾಲ್ ಇಲ್ಲಿಯವರೆಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕಾನೂನುಬದ್ಧವಾಗಿ ಖಾತರಿಪಡಿಸುವಂತೆ ಒತ್ತಾಯಿಸಿ ನೂರಾರು ರೈತರು ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡುವವರೆಗೂ ಉಪವಾಸ ಮುರಿಯುವುದಿಲ್ಲ ಎಂದು ದಲ್ಲೆವಾಲ್ ಹೇಳಿದ್ದರು. ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಮನವೊಲಿಸಲು ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಡಿಸೆಂಬರ್ 31 ರವರೆಗೆ ಸಮಯ ನೀಡಿದೆ, ಅಗತ್ಯವಿದ್ದರೆ ಕೇಂದ್ರದಿಂದ ತಾತ್ವಿಕ ಬೆಂಬಲವನ್ನು ಪಡೆಯಲು ರಾಜ್ಯಕ್ಕೆ ಸ್ವಾತಂತ್ರ್ಯವನ್ನು ನೀಡಿದೆ.
ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್‌ನಡಿಯಲ್ಲಿ ರೈತರು ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಕಳೆದ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. 101 ರೈತರ ಜಾಥಾ ಗುಂಪು ಡಿಸೆಂಬರ್ 6 ಮತ್ತು 14 ರ ನಡುವೆ ಮೂರು ಬಾರಿ ಕಾಲ್ನಡಿಗೆಯಲ್ಲಿ ದೆಹಲಿಗೆ ಮೆರವಣಿಗೆ ಮಾಡಲು ಪ್ರಯತ್ನಿಸಿತು. ಆದರೆ ಹರಿಯಾಣದ ಭದ್ರತಾ ಸಿಬ್ಬಂದಿ ಅವರನ್ನು ತಡೆದರು.
Advertisement