
ತಿರುವನಂತಪುರಂ: ತಿರುವನಂತಪುರದ ವಿಶೇಷ ತ್ವರಿತ ನ್ಯಾಯಾಲಯ ಐದು ವರ್ಷಗಳ ಹಿಂದೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಟ್ಯೂಷನ್ ಶಿಕ್ಷಕನಿಗೆ 111 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.05 ಲಕ್ಷ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ದಂಡವನ್ನು ಪಾವತಿಸದಿದ್ದರೆ, ಅಪರಾಧಿ, ಮನೋಜ್(44) ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.
ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪತಿ ದೌರ್ಜನ್ಯ ಎಸಗುತ್ತಿರುವ ವಿಚಾರ ತಿಳಿದ ಮನೋಜ್ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನ್ಯಾಯಾಧೀಶರಾದ ಆರ್ ರೇಖಾ ಅವರು ತಮ್ಮ ತೀರ್ಪಿನಲ್ಲಿ, ಮನೋಜ್ ಯಾವುದೇ ಕರುಣೆಗೆ ಅರ್ಹವಲ್ಲದ ಅಪರಾಧವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಈ ಘಟನೆ ಜುಲೈ 2, 2019 ರಂದು ನಡೆದಿದ್ದು, ಅಪರಾಧಿ ಸರ್ಕಾರಿ ನೌಕರನಾಗಿದ್ದರೂ ತನ್ನ ನಿವಾಸದಲ್ಲಿ ಟ್ಯೂಷನ್ ತರಗತಿಗಳನ್ನು ನಡೆಸುತ್ತಿದ್ದರು. ಅವರು ಸಂತ್ರಸ್ಥ ವಿದ್ಯಾರ್ಥಿನಿಯನ್ನು ವಿಶೇಷ ತರಗತಿಗೆ ಕರೆಸಿಕೊಂಡು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಅದನ್ನು ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಸಹ ತೆಗೆದುಕೊಂಡಿದ್ದಾರೆ.
ಘಟನೆಯ ನಂತರ, ವಿದ್ಯಾರ್ಥಿನಿ ಭಯಗೊಂಡಿದ್ದು, ಟ್ಯೂಷನ್ ತರಗತಿಗಳಿಗೆ ಹೋಗುವುದನ್ನು ನಿಲ್ಲಿಸಿದ್ದಾಳೆ. ನಂತರ ಅಪರಾಧಿ ಶಿಕ್ಷಕ ಘಟನೆಯ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.
ಘಟನೆ ಬಗ್ಗೆ ತಿಳಿದ ಮಗುವಿನ ಮನೆಯವರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಶಿಕ್ಷಕನ್ನು ಬಂಧಿಸಿದ್ದರು. ನಂತರ, ಆತನ ಫೋನ್ ಅನ್ನು ವಶಪಡಿಸಿಕೊಂಡು ಬಹಿರಂಗ ಪಡಿಸಲಾದ ಫೋಟೋಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿತ್ತು.
Advertisement