

ವಾಷಿಂಗ್ಟನ್: 31 MQ-9B ಸಶಸ್ತ್ರ ಡ್ರೋನ್ ಗಳನ್ನು ಭಾರತಕ್ಕೆ ಮಾರಾಟ ಮಾಡುವ ಮಹತ್ವದ ಒಪ್ಪಂದಕ್ಕೆ ಅಮೆರಿಕ ಅನುಮೋದನೆ ನೀಡಿದೆ.
ಸುಮಾರು 4 ಶತಕೋಟಿ ಡಾಲರ್ (4 Billion Dollar) ಮೌಲ್ಯದ ಒಪ್ಪಂದದಲ್ಲಿ ಭಾರತಕ್ಕೆ (India) ಎಂಕ್ಯೂ-9ಬಿ ಸೀ ಗಾರ್ಡಿಯನ್ ಡ್ರೋನ್‌ಗಳ ಮಾರಾಟಕ್ಕೆ (31 MQ-9B Armed Drones) ಅಮೆರಿಕ (America) ಗ್ರೀನ್ ಸಿಗ್ನಲ್ ನೀಡಿದ್ದು, ಡಿಫೆನ್ಸ್ ಸೆಕ್ಯುರಿಟಿ ಕೋಆಪರೇಶನ್ ಸಂಸ್ಥೆಯು ಅಗತ್ಯವಿರುವ ಪ್ರಮಾಣೀಕರಣವನ್ನು ಪಡೆದುಕೊಂಡಿದ್ದು, ಇಂದು ಸಂಭವನೀಯ ಮಾರಾಟದ ಕುರಿತು ಅಮೆರಿಕ ಕಾಂಗ್ರೆಸ್‌ಗೆ ಸೂಚಿಸಲಿದೆ ಎಂದು ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಭಾರತ 31 ಎಂಕ್ಯೂ-9ಬಿ ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದರು. ಈ ಉದ್ದೇಶಿತ ಮಾರಾಟವು ಅಮೆರಿಕ-ಭಾರತೀಯ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಮತ್ತು ರಾಜಕೀಯ ಸ್ಥಿರತೆ, ಶಾಂತಿಗಾಗಿ ಪ್ರಮುಖ ಶಕ್ತಿಯಾಗಿ ಮುಂದುವರಿಯುವ ಪ್ರಮುಖ ರಕ್ಷಣಾ ಪಾಲುದಾರರ ಭದ್ರತೆಯನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಅಮೆರಿಕ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ.
ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ವಲಯದಲ್ಲಿ ಆರ್ಥಿಕ ಪ್ರಗತಿ ದ್ಯೋತಕ ಎಂದು ಅಮೆರಿಕದ ರಕ್ಷಣಾ ಭದ್ರತಾ ಸಂಸ್ಥೆ ಹೇಳಿಕೊಂಡಿದ್ದು, ಸರ್ಕಾರದಿಂದ ಸರ್ಕಾರದ ನಡುವಿನ ಈ ಒಪ್ಪಂದವು ಬೈಡೆನ್-ಮೋದಿ ಆಡಳಿತದ ಪ್ರಮುಖ ಹೆಗ್ಗುರುತಾಗಿದೆ.
ಪ್ರಸ್ತಾವಿತ ಮಾರಾಟವು ಕಾರ್ಯಾಚರಣೆಯ ಸಮುದ್ರ ಮಾರ್ಗಗಳಲ್ಲಿ ಮಾನವರಹಿತ ಕಣ್ಗಾವಲು ಮತ್ತು ವಿಚಕ್ಷಣ ಗಸ್ತುಗಳನ್ನು ಸಕ್ರಿಯಗೊಳಿಸುವ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಬೆದರಿಕೆಗಳನ್ನು ಎದುರಿಸಲು ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಭಾರತವು ತನ್ನ ಸೇನೆಯನ್ನು ಆಧುನೀಕರಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಹಾಗಾಗಿ, ಈ ಹೊಸ ನಮೂನೆಯ ಉಪಕರಣಗಳು ಅದರ ಬದ್ಧತೆಗೆ ತೊಂದರೆಯಾಗುವುದಿಲ್ಲ ಎಂದು ಅಮೆರಿಕದ ಸಂಸ್ಥೆ ಹೇಳಿದೆ.
ಐತಿಹಾಸಿಕ ಒಪ್ಪಂದ
ಭಾರತ ಮತ್ತು ಅಮೆರಿಕ ನಡುವಿನ ಈ ನಿರ್ಣಾಯಕ ರಕ್ಷಣಾ ಒಪ್ಪಂದವು ಸುಮಾರು ಆರು ವರ್ಷಗಳ ಅವಧಿಯ ಪ್ರಕ್ರಿಯೆಯಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಅಂತಿಮ ಒಪ್ಪಂದವನ್ನು ಗುರುತಿಸುತ್ತದೆ. ಈ ಒಪ್ಪಂದದ ಮೂಲಕ ಸರ್ಕಾರದಿಂದ ಸರ್ಕಾರಕ್ಕೆ $ 3.99 ಬಿಲಿಯನ್ ಡಾಲರ್ ಒಪ್ಪಂದವನ್ನು ಅಂತಿಮಗೊಳಿಸಲಾಗಿದ್ದು, 31 ಸಶಸ್ತ್ರ ಮತ್ತು ಅತ್ಯಾಧುನಿಕ ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಪಡೆಯಲಿವೆ.
ಒಂದೆಡೆ ಸಾಂಪ್ರದಾಯಿಕ ಶತ್ರು ಪಾಕಿಸ್ತಾನ, ಗಡಿಯಲ್ಲಿ ಪದೇ ಪದೇ ಕಾಲು ಕೆರೆಯುತ್ತಿರುವ, ಇಸ್ರೇಲ್-ಗಾಜಾ ಯುದ್ಧದ ಬಳಿಕ ಸಮುದ್ರ ಮಾರ್ಗದಲ್ಲಿ ಭಾರತಕ್ಕೆ ಸವಾಲಾಗಿರುವ ಹೌತಿ ಬಂಡುಕೋರರು ಮತ್ತು ಖಲಿಸ್ತಾನಿ ಭಯೋತ್ಪಾದಕರ ಬೆದರಿಕೆಗಳ ನಡುವೆಯೇ ಭಾರತ ಮತ್ತು ಅಮೆರಿಕ ನಡುವಿನ ಈ ರಕ್ಷಣಾ ಒಪ್ಪಂದ ಅತ್ಯಂತ ಮಹತ್ವ ಪಡೆದುಕೊಂಡಿದೆ.
Advertisement