'ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ': ಚಂಡೀಗಢ ಮೇಯರ್ ಚುನಾವಣೆ ಕುರಿತು 'ಸುಪ್ರೀಂ' ಆಕ್ರೋಶ

ಚಂಡೀಗಢ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದೆ.
ಚಂಡೀಗಢ ಮೇಯರ್‌ ಚುನಾವಣೆ
ಚಂಡೀಗಢ ಮೇಯರ್‌ ಚುನಾವಣೆ

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದೆ.

ಚಂಡೀಗಢ ಮೇಯರ್ ಚುನಾವಣೆಗೆ ಸಂಬಂಧಿಸಿದ ವೀಡಿಯೋಗ್ರಫಿ ಸೇರಿದಂತೆ ಎಲ್ಲಾ ಮತಪತ್ರಗಳು ಮತ್ತು ಇತರ ಮೂಲ ದಾಖಲೆಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಮೇಯರ್ ಚುನಾವಣೆಯ ರಿಟರ್ನಿಂಗ್ ಆಫೀಸರ್ ಮತಪತ್ರಗಳನ್ನು ತಿದ್ದುವ ಅಥವಾ ವಿರೂಪಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆಯೇ? ಪ್ರಜಾಪ್ರಭುತ್ವವನ್ನು ಈ ರೀತಿ ಕೊಲೆ ಮಾಡಲು ನಾವು ಅನುಮತಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಚಂಡೀಘಡ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮನೋಜ್ ಸೋಂಕರ್ ವಿರುದ್ಧ ಸೋತಿದ್ದ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಕುಲದೀಪ್ ಧಲೋರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನೋಟಿಸ್ ಜಾರಿ ಮಾಡುವಾಗ ಈ ರೀತಿ ಹೇಳಿದೆ.

ಅಲ್ಲದೆ ಫೆಬ್ರವರಿ 7 ರಂದು ನಿಗದಿಯಾಗಿದ್ದ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಸಭೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇಂದಿನ ವಿಚಾರಣೆ ವೇಳೆ ಚುನಾವಣಾಧಿಕಾರಿ ಅನಿಲ್‌ ಮಸಿಹ್‌ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದೆಯಲ್ಲದೆ ಅವರು ಮತ ಪತ್ರಗಳಲ್ಲಿ ಗೀಚಿದ್ದಾರೆಂದು ತಿಳಿಯುತ್ತದೆ ಎಂದು ಹೇಳಿದೆ. “ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರೇಕೆ ಕ್ಯಾಮೆರಾ ನೋಡುತ್ತಿದ್ದರು? ಸಾಲಿಸಿಟರ್‌ ಅವರೇ ಇದು ಪ್ರಜಾಪ್ರಭುತ್ವದ ಅಪಹಾಸ್ಯ, ಕಗ್ಗೊಲೆ,” ಎಂದು ಸಿಜೆಐ ಹೇಳಿದರು. 

ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಎಂಟು ಮತಗಳನ್ನು ಚುನಾವಣಾಧಿಕಾರಿ ಅಮಾನ್ಯಗೊಳಿಸಿದ ನಂತರ ಬಿಜೆಪಿಗೆ 16 ಮತಗಳು ಹಾಗೂ ಆಪ್‌, ಕಾಂಗ್ರೆಸ್‌ ಮೈತ್ರಿಕೂಟಕ್ಕೆ 12 ಮತಗಳು ದೊರೆತು ಬಿಜೆಪಿಯ ಮನೋಜ್‌ ಸೋಂಕರ್‌ ಅವರನ್ನು ಮೇಯರ್‌ ಆಗಿ ಆಯ್ಕೆಗೊಳಿಸಿದ್ದು ಭಾರೀ ವಿವಾದಕ್ಕೀಡಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com