ಸಲ್ಮಾನ್ ಖುರ್ಷಿದ್ ಪತ್ನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ವಿಶೇಷ ನ್ಯಾಯಾಲಯ!

ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣದಲ್ಲಿ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ವಿರುದ್ಧ ಸಂಸದ-ಶಾಸಕ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ಸಲ್ಮಾನ್ ಖುರ್ಷಿದ್, ಅವರ ಪತ್ನಿ
ಸಲ್ಮಾನ್ ಖುರ್ಷಿದ್, ಅವರ ಪತ್ನಿ

ನವದೆಹಲಿ: ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣದಲ್ಲಿ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ವಿರುದ್ಧ ಸಂಸದ-ಶಾಸಕ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.

ಈ ಸಂಬಂಧ ಲೂಯಿಸ್ ಖುರ್ಷಿದ್ ಸೇರಿದಂತೆ ಇಬ್ಬರ ವಿರುದ್ಧ ವಿಶೇಷ ಸಂಸದ-ಶಾಸಕ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಶಾಂಭವಿ ಬುಧವಾರ ಬಂಧನ ವಾರಂಟ್ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ನಿಗದಿಪಡಿಸಿದ್ದಾರೆ.

2009-10ನೇ ಸಾಲಿನಲ್ಲಿ ಲೂಯಿಸ್ ಖುರ್ಷಿದ್ ಅವರ ಡಾ.ಜಾಕೀರ್ ಹುಸೇನ್ ಸ್ಮಾರಕ ಟ್ರಸ್ಟ್ ಭೋಜಿಪುರ ಪ್ರದೇಶದಲ್ಲಿ ನಡೆಸುತ್ತಿರುವ ಡಾ.ಜಾಕೀರ್ ಹುಸೇನ್ ಸ್ಮಾರಕ ಅಂಗವಿಕಲರ ಟ್ರಸ್ಟ್ ವತಿಯಿಂದ ಕೃತಕ ಅಂಗಗಳು ಮತ್ತು ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆ ನಡೆಸಿದ್ದು, ನಕಲಿ ಸೀಲ್ ಮತ್ತು ಸಹಿ ಬಳಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಚಿಂತ್ಯ ದ್ವಿವೇದಿ ತಿಳಿಸಿದರು.

ಈ ಕುರಿತು 2017ರಲ್ಲಿ ಭೋಜಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೂಯಿಸ್ ಖುರ್ಷಿದ್ ಮತ್ತು ಸಂಸ್ಥೆಯ ಕಾರ್ಯದರ್ಶಿ ಮೊಹಮ್ಮದ್ ಅಥರ್ ಫಾರೂಕಿ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಇಬ್ಬರೂ ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರ ನ್ಯಾಯಾಲಯವು ಹಲವು ಬಾರಿ ಸಮನ್ಸ್ ಹೊರಡಿಸಿತ್ತು. ಆದರೆ ಆರೋಪಿಗಳು ಹಾಜರಾಗಿರಲಿಲ್ಲ ಅಥವಾ ಪ್ರಕರಣದಲ್ಲಿ ಜಾಮೀನು ಪಡೆದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com