ನಾಳೆ ವಿಶ್ವಾಸ ಮತಯಾಚನೆ: ಪಾಟ್ನಾಗೆ ಮರಳಲಿರುವ ಕಾಂಗ್ರೆಸ್ ಶಾಸಕರು, ಮಾಜಿ ಡಿಸಿಎಂ ತೇಜಸ್ವಿ ಮನೆಯಲ್ಲಿ ವಾಸ್ತವ್ಯ!

ಬಿಹಾರದಲ್ಲಿ ವಿಶ್ವಾಸ ಮತಕ್ಕೆ 24 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಕಾಂಗ್ರೆಸ್ ಶಾಸಕರು ತೆಲಂಗಾಣದಿಂದ ಪಾಟ್ನಾಕ್ಕೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ನಿತೀಶ್ ಕುಮಾರ್-ತೇಜಸ್ವಿ ಯಾದವ್
ನಿತೀಶ್ ಕುಮಾರ್-ತೇಜಸ್ವಿ ಯಾದವ್

ಪಾಟ್ನಾ: ಬಿಹಾರದಲ್ಲಿ ವಿಶ್ವಾಸ ಮತಕ್ಕೆ 24 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಕಾಂಗ್ರೆಸ್ ಶಾಸಕರು ತೆಲಂಗಾಣದಿಂದ ಪಾಟ್ನಾಕ್ಕೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ಬಿಹಾರದಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನ ಕಾಂಗ್ರೆಸ್ ತನ್ನ ಶಾಸಕರನ್ನು ಹೈದರಾಬಾದ್‌ಗೆ ಕಳುಹಿಸಿತ್ತು. ಪಕ್ಷದ ಶಾಸಕರ ವಿಮಾನವು ಸಂಜೆ 5 ಗಂಟೆಗೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ. ಶಾಸಕರು ನೇರವಾಗಿ ಮಾಜಿ ಉಪ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ನಿವಾಸಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾದವ್ ಅವರ ಅಧಿಕೃತ ಬಂಗಲೆಯಾದ ದೇಶರತ್ನ ಮಾರ್ಗ್ 5 ರಲ್ಲಿ ಕಾಂಗ್ರೆಸ್ ಶಾಸಕರು ಆರ್‌ಜೆಡಿ ಮತ್ತು ಎಡಪಕ್ಷದ ಶಾಸಕರೊಂದಿಗೆ ಸೋಮವಾರದವರೆಗೆ ಇರಲಿದ್ದಾರೆ. ತೇಜಸ್ವಿ ಯಾದವ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಈ ಬಂಗಲೆಯನ್ನು ಮಂಜೂರು ಮಾಡಲಾಗಿತ್ತು.

ಮಹಾಮೈತ್ರಿಕೂಟವು ಕಾಂಗ್ರೆಸ್, ಆರ್‌ಜೆಡಿ ಮತ್ತು ಎಡಪಕ್ಷಗಳನ್ನು ಒಳಗೊಂಡಿದೆ. ಜನತಾದಳ ಯುನೈಟೆಡ್ (ಜೆಡಿಯು) ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿಗೆ ಬಂದಿದ್ದರಿಂದ ಮಹಾಘಟಬಂಧನ್ ಅಧಿಕಾರವನ್ನು ಕಳೆದುಕೊಂಡಿತ್ತು. 243 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 128 ಶಾಸಕರೊಂದಿಗೆ ಎನ್‌ಡಿಎ ಉತ್ತಮ ಸ್ಥಿತಿಯಲ್ಲಿದೆ.

ಪಕ್ಷವು ಕೇವಲ 19 ಶಾಸಕರನ್ನು ಹೊಂದಿದ್ದರೂ ಸಹ ವಿಶ್ವಾಸ ಮತಕ್ಕೂ ಮುನ್ನ ತಮ್ಮ ಶಾಸಕರನ್ನು ಖರೀದಿಸಬಹುದು ಎಂಬ ಆತಂಕ ಕಾಂಗ್ರೆಸ್ಸೀಗಿತ್ತು. ಅದಕ್ಕಾಗಿಯೇ ಅದು ತನ್ನ ಶಾಸಕರನ್ನು ದಕ್ಷಿಣ ರಾಜ್ಯಕ್ಕೆ ಕಳುಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com