NCP ಪಕ್ಷವನ್ನು ಅದರ ಸಂಸ್ಥಾಪಕರಿಂದ ಚುನಾವಣಾ ಆಯೋಗ ಕಸಿದುಕೊಂಡಿತು: ಶರದ್ ಪವಾರ್
ಪುಣೆ: ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್ ಸಿಪಿ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡುವ ಚುನಾವಣಾ ಆಯೋಗದ ನಿರ್ಧಾರ 'ಆಶ್ಚರ್ಯಕರವಾಗಿದೆ ಎಂದಿರುವ ಹಿರಿಯ ರಾಜಕಾರಣಿ ಶರದ್ ಪವಾರ್ , ಚುನಾವಣಾ ಸಂಸ್ಥೆಯು ಪಕ್ಷವನ್ನು ಅದರ ಸಂಸ್ಥಾಪಕರ ಕೈಯಿಂದ 'ಕಿತ್ತು' ಇತರರಿಗೆ ನೀಡಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮ ಮತ್ತು ಸಿದ್ಧಾಂತವು ಜನರಿಗೆ ಮುಖ್ಯವಾಗಿದೆ. ಆದರೆ ಸಂಕೇತವು ಸೀಮಿತ ಅವಧಿಗೆ ಉಪಯುಕ್ತವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಶರದ್ ಪವಾರ್‌ಗೆ ಹಿನ್ನಡೆಯಾಗಿ ಫೆಬ್ರವರಿ 6 ರಂದು ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನಿಜವಾದ ಎನ್‌ಸಿಪಿ ಎಂದು ಗುರುತಿಸಿತು ಮತ್ತು ಅವರ ನೇತೃತ್ವದ ಗುಂಪಿಗೆ ಪಕ್ಷದ ಚಿಹ್ನೆ 'ಗಡಿಯಾರ'ವನ್ನು ಸಹ ನೀಡಿತು."ಜನರು ಚುನಾವಣಾ ಆಯೋಗದ ತೀರ್ಪನ್ನು ಬೆಂಬಲಿಸುವುದಿಲ್ಲ ಎಂಬ ವಿಶ್ವಾಸವಿದೆ. ಅದರ ವಿರುದ್ಧ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಶರದ್ ಪವಾರ್ ಬಣಕ್ಕೆ NCP-SP ಹೊಸ ಹೆಸರು: ಚುನಾವಣಾ ಆಯೋಗ
ಚುನಾವಣಾ ಆಯೋಗ ನಮ್ಮ ಚಿಹ್ನೆಯನ್ನು ಕಸಿದುಕೊಂಡಿದ್ದು ಮಾತ್ರವಲ್ಲದೆ ನಮ್ಮ ಪಕ್ಷವನ್ನು ಬೇರೆಯವರಿಗೆ ಹಸ್ತಾಂತರಿಸಿದೆ. ಚುನಾವಣಾ ಆಯೋಗ ಪಕ್ಷವನ್ನು ಸ್ಥಾಪಿಸಿದ ಮತ್ತು ಕಟ್ಟಿದವರ ಕೈಯಿಂದ ಅದನ್ನು ಕಿತ್ತು ಇತರರಿಗೆ ನೀಡಿದೆ; ದೇಶದಲ್ಲಿ ಹಿಂದೆಂದೂ ಈ ರೀತಿ ನಡೆದಿರಲಿಲ್ಲ" ಎಂದು ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ 1999 ರಲ್ಲಿ ಎನ್‌ಸಿಪಿ ಸ್ಥಾಪಿಸಿದ ಪವಾರ್ ಹೇಳಿದರು.
ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ ಪವಾರ್ ಅವರು ತಮ್ಮ ಮೊದಲ ಚುನಾವಣೆಯಲ್ಲಿ 'ಜೋಡಿ ಎತ್ತುಗಳ' ಚಿಹ್ನೆಯ ಮೇಲೆ ಸ್ಪರ್ಧಿಸಿದನ್ನು ಸ್ಮರಿಸಿಕೊಂಡರು. ಯಾವುದೇ ಚಿಹ್ನೆಗಿಂತ ಕಾರ್ಯಕ್ರಮ ಮತ್ತು ಸಿದ್ಧಾಂತವು ಮುಖ್ಯವಾಗಿದೆ ಎಂದು ಅವರು ಹೇಳಿದರು. ಶರದ್ ಪವಾರ್ ನೇತೃತ್ವದ ಗುಂಪಿಗೆ ಚುನಾವಣಾ ಸಂಸ್ಥೆಯು 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್' ಹೆಸರನ್ನು ನಿಗದಿಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ