ಒಡಿಶಾ: ಚಿತೆಗೆ ಬೆಂಕಿ ಹಚ್ಚುವ ಮುನ್ನಾ ಕಣ್ಣು ತೆರೆದ ಮಹಿಳೆ!
ಗಂಜಾಂ: ಮನೆಯಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಮಶಾನಕ್ಕೆ ಹೊತೊಯ್ಯಲಾಗಿದ್ದ 52 ವರ್ಷದ ಮಹಿಳೆಯೊಬ್ಬರು ಚಿತೆಗೆ ಬೆಂಕಿ ಹಚ್ಚುವ ಮುನ್ನಾ ಕಣ್ಣು ತೆರೆದಿದ್ದಾರೆ. ಹೌದು. ಅಚ್ಚರಿಯಾದರೂ ಇದು ನಿಜ. ದಕ್ಷಿಣ ಜಿಲ್ಲೆ ಗಂಜಾಂನ ಬೆರ್ಹಾಂಪುರ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ ಎಂದು ಕುಟುಂಬ ಮಂಗಳವಾರ ತಿಳಿಸಿದೆ.
ಸೋಮವಾರ ಸಂಜೆ ಸ್ಮಶಾನದಿಂದ ಮನೆಗೆ ಮರಳಿದ ನಂತರ ಮಹಿಳೆಯ ಕುಟುಂಬ ಸದಸ್ಯರು ಅವರನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಡ ಕುಟುಂಬಕ್ಕೆ ಸೇರಿದ ಮಹಿಳೆ ಫೆಬ್ರವರಿ 1 ರಂದು ಮನೆಯಲ್ಲಿ ಬೆಂಕಿ ಆಕಸ್ಮಿಕದಲ್ಲಿ ಶೇ.50 ರಷ್ಟು ಸುಟ್ಟ ಗಾಯಗಳಿಂದಾಗಿ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯ ಅಧಿಕಾರಿಗಳು ಆಕೆಯನ್ನು ಬೇರೆ ಕಡೆಗೆ ಕರೆದೊಯ್ಯಲು ಸೂಚಿಸಿದಾಗ ಹಣದ ಕೊರತೆಯಿಂದಾಗಿ ಪತಿ ಮನೆಗೆ ಕರೆದೊಯ್ದಿದ್ದರು. ಅಂದಿನಿಂದ ಆಕೆ ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸೋಮವಾರ, ಆಕೆ ಕಣ್ಣು ತೆರೆಯುತ್ತಿರಲ್ಲಿಲ್ಲ ಮತ್ತು ಉಸಿರಾಡುತ್ತಿಲ್ಲ ಎಂದು ಕಂಡುಬಂದಾಗ ಸತ್ತಿರಬಹುದೆಂದು ಭಾವಿಸಿದ್ದೇವೆ. ನಂತರ ಇತರರಿಗೆ ತಿಳಿಸಿದ್ದೇವೆ ಎಂದು ಆಕೆಯ ಪತಿ ಸಿಬರಮ್ ಪಾಲೋ ಹೇಳಿದರು. ವೈದ್ಯರನ್ನು ಸಂಪರ್ಕಿಸದೆ ಅಥವಾ ಮರಣ ಪ್ರಮಾಣಪತ್ರವನ್ನು ಪಡೆಯಲು ಪ್ರಯತ್ನಿಸದೆ, ಅವರು ಬರ್ಹಾಂಪುರ ಮುನ್ಸಿಪಲ್ ಕಾರ್ಪೊರೇಶನ್‌ನ ಶವ ಸಾಗಿಸುವ ವಾಹನದಲ್ಲಿ ದೇಹವನ್ನು ಬಿಜಿಪುರ ಬಳಿಯ ಸ್ಮಶಾನಕ್ಕೆ ಕೊಂಡೊಯ್ದಿದ್ದರು ಎನ್ನಲಾಗಿದೆ.

