
ಚಂಡೀಗಢ: ಅಂಬಾಲಾ ಬಳಿಯ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ನತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಶುಕ್ರವಾರ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಗ್ಯಾರಂಟಿ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ 'ದೆಹಲಿ ಚಲೋ' ಮೆರವಣಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಪಂಜಾಬ್‌ನ ಪ್ರತಿಭಟನಾ ನಿರತ ರೈತರು ಹರಿಯಾಣದ ರಾಜ್ಯದ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರತಿಭಟನೆಯ ಮೊದಲ ಎರಡು ದಿನಗಳಲ್ಲಿ ರೈತರು ಮತ್ತು ಹರಿಯಾಣ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು.
ತಮ್ಮ ಬೇಡಿಕೆಗಳಿಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ 'ದೆಹಲಿ ಚಲೋ' ಮೆರವಣಿಗೆಗೆ ಕರೆ ನೀಡಿದ್ದವು.
ಪಂಜಾಬ್‌ನ ರೈತರು ಕಳೆದ ಮಂಗಳವಾರ ರಾಷ್ಟ್ರ ರಾಜಧಾನಿ ಕಡೆಗೆ ತಮ್ಮ ಮೆರವಣಿಗೆಯನ್ನು ಆರಂಭಿಸಿದ್ದರು. ಆದರೆ ಶಂಭು ಮತ್ತು ಖಾನೌರಿ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದರು.
ಎಂಎಸ್‌ಪಿಯ ಕಾನೂನು ಖಾತರಿಯ ಹೊರತಾಗಿ, ರೈತರು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ದರಗಳಲ್ಲಿ ಯಾವುದೇ ಹೆಚ್ಚಳ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. 2013ರ ಭೂಸ್ವಾಧೀನ ಕಾಯಿದೆಯನ್ನು ಮರುಸ್ಥಾಪಿಸಲು ಮತ್ತು 2020-21ರಲ್ಲಿ ನಡೆದ ಹಿಂದಿನ ಆಂದೋಲನದ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
Advertisement