ಛತ್ತೀಸ್‌ಗಢದಲ್ಲಿ ನಾಲ್ವರು ಮಾವೋವಾದಿಗಳ ಬಂಧನ; ಭಾರಿ ಪ್ರಮಾಣದ ಸ್ಫೋಟಕ ವಶಕ್ಕೆ
ಬಿಜಾಪುರ: ಛತ್ತೀಸ್‌ಗಢದ ಬಿಜಾಪುರದಲ್ಲಿ ಸೋಮವಾರ ನಾಲ್ವರು ಮಾವೋವಾದಿಗಳನ್ನು ಬಂಧಿಸಲಾಗಿದ್ದು, ಅವರಿಂದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುದ್ರು ಮದ್ವಿ, ರಾಮ್ ಬೆಡ್ಜಾ, ಬುದ್ರಾಮ್ ತಾಟಿ ಮತ್ತು ಸುಖರಾಮ್ ಕಲ್ಮು ಎಂಬ ಮಾವೋವಾದಿಗಳನ್ನು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಕುಟ್ರು ಪ್ರದೇಶದ ಕತ್ತೂರು ಗ್ರಾಮದ ಮಾರುಕಟ್ಟೆಯಲ್ಲಿ ಬಂಧಿಸಲಾಗಿದ್ದು, ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಐಇಡಿ ಬಾಂಬ್ ಇಡಲು ಸಂಚು ರೂಪಿಸಿದ್ದರು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
ಅಲ್ಲದೆ ಬಂಧಿತ ಮಾವೋವಾದಿಗಳಿಂದ ಟಿಫಿನ್ ಬಾಂಬ್, ಪೆನ್ಸಿಲ್ ಸೆಲ್ ಪ್ಯಾಕೆಟ್, ಜಿಲೆಟಿನ್ ಕಡ್ಡಿ ಸೇರಿದಂತೆ ಹಲವು ಬಗೆಯ ಸ್ಫೋಟಕ ಉಪಕರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು.
ರಾಣಿಬೋಡ್ಲಿ, ಕುಟ್ರು, ಮುಕ್ರಂ ಮತ್ತು ತಾಡ್ಮೇರ್ ಪ್ರದೇಶಗಳಲ್ಲಿ ಗಸ್ತಿನಲ್ಲಿದ್ದ ನಕ್ಸಲ್ ನಿಗ್ರಹ ಜಿಲ್ಲಾ ಮೀಸಲು ಪಡೆ ಮತ್ತು ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.