ಹುಸಿ ಬಾಂಬ್ ಬೆದರಿಕೆ: ಮಗುವಿನೊಂದಿಗೆ ಮಹಿಳೆ ಬಂಧನ; ದೆಹಲಿ-ಕೋಲ್ಕತ್ತಾ ವಿಮಾನ 5 ಗಂಟೆ ವಿಳಂಬ
ನವದೆಹಲಿ: ಪ್ರಯಾಣಿಕರ ಸಾಮಾನು ಸರಂಜಾಮುಗಳಲ್ಲಿ ಸ್ಫೋಟಕಗಳನ್ನು ಬಚ್ಚಿಟ್ಟಿರುವುದಾಗಿ ಮಂಗಳವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಬಂದಿದ್ದು, ಕೋಲ್ಕತ್ತಾಗೆ ತೆರಳುವ ಸ್ಪೈಸ್‌ಜೆಟ್ ವಿಮಾನ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಬೆದರಿಕೆ ಪ್ರಕರಣ ಸಂಬಂಧ ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯನ್ನು ಭದ್ರತಾ ಏಜೆನ್ಸಿಗಳು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
SG-8263 ಎಂಬ ವಿಮಾನವು ಇಂದು ಬೆಳಗ್ಗೆ 5:40 ರ ಸುಮಾರಿಗೆ ಹೊರಡಲು ಸಿದ್ಧವಾಗಿತ್ತು. ಆದರೆ ಭದ್ರತಾ ಏಜೆನ್ಸಿಗಳು ವಿಧ್ವಂಸಕ-ವಿರೋಧಿ ತಪಾಸಣೆ ಮತ್ತು ಚೆಕ್-ಇನ್ ಹಾಗೂ ಕ್ಯಾಬಿನ್ ಸಾಮಾನುಗಳ ಪುನರಾವರ್ತಿತ ಪರಿಶೀಲನೆ ಪೂರ್ಣಗೊಳಿಸಿದ ನಂತರ 11:30 ರ ನಂತರ ವಿಮಾನ ಟೇಕಾಫ್ ಆಗಲು ಅನುಮತಿಸಲಾಯಿತು ಎಂದು ಅವರು ಹೇಳಿದ್ದಾರೆ.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಪೋರ್ಟ್ ಡ್ಯೂಟಿ ಮ್ಯಾನೇಜರ್‌ಗೆ ಬೆಳಗ್ಗೆ 5:20 ರ ಸುಮಾರಿಗೆ ಈ ಫ್ಲೈಟ್‌ನಲ್ಲಿ "ಸುರಕ್ಷತಾ ಸಮಸ್ಯೆ ಇದೆ" ಮತ್ತು "ಯಾರೋ ಬ್ಯಾಗ್‌ಗಳು ಮತ್ತು ಲಗೇಜ್‌ಗಳಲ್ಲಿ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ" ಎಂದು ಇಮೇಲ್ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಕ್ಷಣವೇ ವಿವಿಧ ಭದ್ರತಾ ಏಜೆನ್ಸಿಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಒಳಗೊಂಡ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಶೋಧ ನಡೆಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ