ಪ್ರಯಾಣದುದ್ದಕ್ಕೂ ಸುಚನಾ ಸೇಠ್ ಒಂದೇ ಒಂದು ಮಾತಾಡಲಿಲ್ಲ, ಶಾಂತವಾಗಿದ್ದರು: ಟ್ಯಾಕ್ಸಿ ಚಾಲಕ

ನಾಲ್ಕು ವರ್ಷದ ಮಗನನ್ನು ಕೈಯಾರೆ ಕೊಂದ ಆರೋಪದಲ್ಲಿ ಬಂಧಿತರಾಗಿರುವ ಎಐ ಸ್ಟಾರ್ಟ್‌ಅಪ್‌ ಸಿಇಒ ಸುಚನಾ ಸೇಠ್, ಮಗುವನ್ನು ಹತ್ಯೆ ಮಾಡಿ ಗೋವಾದಿಂದ ಕರ್ನಾಟಕಕ್ಕೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಮೌನವಾಗಿದ್ದರು ಎಂದು ವಾಹನದ ಚಾಲಕ ಹೇಳಿದ್ದಾರೆ. 
ಸುಚನಾ ಸೇಠ್ ರನ್ನು ಬಂಧಿಸಿ ಪೊಲೀಸರು ಕೋರ್ಟ್ ಗೆ ಕರೆತರುತ್ತಿರುವುದು
ಸುಚನಾ ಸೇಠ್ ರನ್ನು ಬಂಧಿಸಿ ಪೊಲೀಸರು ಕೋರ್ಟ್ ಗೆ ಕರೆತರುತ್ತಿರುವುದು

ಪಣಜಿ: ನಾಲ್ಕು ವರ್ಷದ ಮಗನನ್ನು ಕೈಯಾರೆ ಕೊಂದ ಆರೋಪದಲ್ಲಿ ಬಂಧಿತರಾಗಿರುವ ಎಐ ಸ್ಟಾರ್ಟ್‌ಅಪ್‌ ಸಿಇಒ ಸುಚನಾ ಸೇಠ್, ಮಗುವನ್ನು ಹತ್ಯೆ ಮಾಡಿ ಗೋವಾದಿಂದ ಕರ್ನಾಟಕಕ್ಕೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಮೌನವಾಗಿದ್ದರು ಎಂದು ವಾಹನದ ಚಾಲಕ ಹೇಳಿದ್ದಾರೆ. 

ನಿನ್ನೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೇಠ್ ಅವರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿದ ಟ್ಯಾಕ್ಸಿ ಡ್ರೈವರ್ ರೇ ಜಾನ್, 10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಇಡೀ ಪ್ರವಾಸದಲ್ಲಿ ಸುಚನಾ ಸೇಠ್ ಶಾಂತವಾಗಿಯೇ ಕುಳಿತಿದ್ದರು, ಒಂದೇ ಒಂದು ಮಾತನ್ನೂ ಆಡಲಿಲ್ಲ ಎಂದಿದ್ದಾರೆ. 

ಸೇಠ್ (39ವ) ಸೋಮವಾರ ರಾತ್ರಿ ತನ್ನ ಮಗನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಮಂಗಳವಾರ ಗೋವಾಕ್ಕೆ ತರುತ್ತಿದ್ದಾಗ ಕರ್ನಾಟಕದ ಚಿತ್ರದುರ್ಗದ ಹಿರಿಯೂರಿನಲ್ಲಿ ಬಂಧಿಸಲ್ಪಟ್ಟರು. ಮಾಪುಸಾ ಪಟ್ಟಣದ ನ್ಯಾಯಾಲಯ ಆಕೆಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಗೋವಾದ ಕ್ಯಾಂಡೋಲಿಮ್ ಮೂಲದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ಕೊಂದ ಆರೋಪ ಆಕೆಯ ಮೇಲಿದೆ. ಸರ್ವಿಸ್ ಅಪಾರ್ಟ್ಮೆಂಟ್ ಸಿಬ್ಬಂದಿ ಸೇಠ್ ಗೆ ಟ್ಯಾಕ್ಸಿಯನ್ನು ಬುಕ್ ಮಾಡಿ ಕೊಟ್ಟರು ಎಂದು ಜಾನ್ ಹೇಳಿದರು.

ನಾನು ಸರ್ವಿಸ್ ಅಪಾರ್ಟ್‌ಮೆಂಟ್ ತಲುಪಿದಾಗ, ಸುಚನಾ ಸೇಠ್ ತನ್ನ ಬ್ಯಾಗ್ ನ್ನು ರಿಸೆಪ್ಶನ್‌ನಿಂದ ಟ್ಯಾಕ್ಸಿಗೆ ಸಾಗಿಸಲು ನನ್ನನ್ನು ಕೇಳಿದಳು. ಅದು ಬಹಳ ಭಾರವಾಗಿತ್ತು. ಭಾರ ಕಂಡು ಬ್ಯಾಗ್‌ನಿಂದ ಸ್ವಲ್ಪ ವಸ್ತುಗಳನ್ನು ತೆಗೆಯಬಹುದೇ ಎಂದು ಕೇಳಿದೆ. ಅದಕ್ಕೆ ಅವರು ನಿರಾಕರಿಸಿದರು. ನಾವು ಬ್ಯಾಗ್ ನ್ನು ಕಾರಿನ ಬೂಟ್‌ಗೆ ಎಳೆಯಬೇಕಾಯಿತು ಎಂದು ನೆನಪು ಮಾಡಿಕೊಂಡರು. 

ಉತ್ತರ ಗೋವಾದ ಬಿಚೋಲಿಮ್ ಪಟ್ಟಣಕ್ಕೆ ಬಂದಾಗ ನೀರಿನ ಬಾಟಲಿ ಕೇಳಿದ್ದು ಬಿಟ್ಟರೆ ನನ್ನಲ್ಲಿ ಬೇರೇನೂ ಮಾತನಾಡಿರಲಿಲ್ಲ. ಸೋಮವಾರ ಬೆಂಗಳೂರಿಗೆ ತೆರಳುತ್ತಿದ್ದಾಗ ಕರ್ನಾಟಕ-ಗೋವಾ ಗಡಿಯಲ್ಲಿರುವ ಚೋರ್ಲಾ ಘಾಟ್ ವಿಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಕ್ಲಿಯರ್ ಆಗಲು ಕನಿಷ್ಠ ನಾಲ್ಕು ಗಂಟೆ ಬೇಕಾಯಿತು. ಟ್ರಾಫಿಕ್ ಜಾಮ್ ಕಡಿಮೆಯಾಗಲು ಆರು ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಮೇಡಮ್ ಗೆ ಹೇಳಿದೆ, ಹಿಂತಿರುಗಿ ವಿಮಾನ ನಿಲ್ದಾಣಕ್ಕೆ ಹೋಗಬಹುದೇ ಎಂದು ಕೇಳಿದೆ.  ಅದಕ್ಕೆ ಅವರು ಬೇಡ, ರಸ್ತೆಯ ಮೂಲಕವೇ ಹೋಗಿ ಎಂದರು, ಆಗ ಏನೋ ಅಸಹಜವಾಗಿದೆ ಎಂದು ನನಗನ್ನಿಸಿತು ಎಂದು ಟ್ಯಾಕ್ಸಿ ಚಾಲಕ ಹೇಳುತ್ತಾನೆ. 

ನಂತರ ತನಗೆ ಗೋವಾ ಪೊಲೀಸರಿಂದ ಕರೆ ಬಂದಿದ್ದು, ತನ್ನ ಪ್ರಯಾಣಿಕನ ಬಗ್ಗೆ ಏನಾದರೂ ಅನುಮಾನವಿದೆ ಎಂದು ಕೇಳಿದರು. ಕಲಂಗುಟ್ ಪೋಲೀಸರು ಹತ್ತಿರದ ಪೊಲೀಸ್ ಠಾಣೆಯನ್ನು ಹುಡುಕಿ ಅಲ್ಲಿಗೆ ಕರೆದೊಯ್ಯಲು ಹೇಳಿದರು.  ನಾನು ಗೂಗಲ್ ಮ್ಯಾಪ್ ನಲ್ಲಿ ಜಿಪಿಎಸ್ ಮೂಲಕ ಹುಡುಕಲು ಪ್ರಯತ್ನಿಸಿದೆ. ನಂತರ ಟೋಲ್ ಪ್ಲಾಜಾಗಳಲ್ಲಿ ಪೊಲೀಸರನ್ನು ಹುಡುಕಿದೆ ಆದರೆ ಯಾರೂ ಕಾಣಿಸಲಿಲ್ಲ ಎಂದರು.

ಪೊಲೀಸರ ಕರೆಯಿಂದ ಗಾಬರಿಯಾಗಿ ರಸ್ತೆ ಬದಿಯ ರೆಸ್ಟೋರೆಂಟ್‌ನಲ್ಲಿ ನಿಲ್ಲಿಸುವ ನೆಪದಲ್ಲಿ ಸ್ವಲ್ಪ ಸಮಯ ಕೇಳಿದೆ. ಅಲ್ಲಿ ಪೊಲೀಸ್ ಠಾಣೆಯೊಂದು ಕೇವಲ 500 ಮೀಟರ್ ದೂರದಲ್ಲಿದೆ ಎಂದು ತಿಳಿಯಿತು.

ನಾವು ಬೆಂಗಳೂರಿನಿಂದ ಒಂದೂವರೆ ಗಂಟೆಗಳ ದೂರದಲ್ಲಿದ್ದೆವು. ಐಯಮಂಗಲ ಪೊಲೀಸ್ ಠಾಣೆಗೆ ಟ್ಯಾಕ್ಸಿ ತಿರುಗಿಸಿದೆ. ಅಲ್ಲಿ ಕಲಗುಂಟ ಪೊಲೀಸ್ ಅಧಿಕಾರಿಯೊಬ್ಬರು ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಲೇ ಇದ್ದರು. ಸಂಬಂಧಪಟ್ಟ ಇನ್ಸ್‌ಪೆಕ್ಟರ್ 15 ನಿಮಿಷ ನಂತರ ಹೊರಬಂದರು. ಆಗಲೂ ಸುಚನಾ ಸೇಠ್ ಸುಮ್ಮನೆ ಕಾರಿನಲ್ಲಿ ಕುಳಿತಿದ್ದರು ಎಂದರು. 

ಪೊಲೀಸರು ನಂತ ಆಕೆಯ ಬ್ಯಾಗ್ ನ್ನು ಪರಿಶೀಲಿಸಿದಾಗ ಅದರಲ್ಲಿ ಮಗುವಿನ ದೇಹ ಪತ್ತೆಯಾಯಿತು. ಇದು ನಿಮ್ಮ ಮಗನೇ ಎಂದು ಪೊಲೀಸರು ಕೇಳಿದಾಗ ಆಕೆ, ಶಾಂತವಾಗಿ ಹೌದು ಎಂದು ಉತ್ತರಿಸಿದರು. 

ಸುಚನಾ ಸೇಠ್ ಕೈಬರಹ ಪತ್ತೆ: ಆಕೆಯ ಬ್ಯಾಗ್‌ನಲ್ಲಿ ಟಿಶ್ಯೂ ಪೇಪರ್‌ನಲ್ಲಿ ಐಲೈನರ್‌ನಿಂದ ಬರೆಯಲಾದ ಸುಕ್ಕುಗಟ್ಟಿದ ನೋಟು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಟಿಪ್ಪಣಿಯ ವಿಷಯವನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಆದರೆ ಇದು ತನ್ನ ಮಗುವಿನ ಪಾಲನೆಯ ಬಗ್ಗೆ ಆಕೆ ಅಸಮಾಧಾನಗೊಂಡಿದ್ದು ಸೂಚಿಸುತ್ತದೆ ಎಂದು ಅವರು ಹೇಳಿದರು.

ಆಕೆಯ ಪತಿ ವೆಂಕಟರಮಣಗೆ ನ್ಯಾಯಾಲಯವು ಭೇಟಿಯ ಹಕ್ಕನ್ನು ನೀಡಿದ್ದು, ಅದು ಆಕೆಗೆ ಸರಿಹೋಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com