
ನವದೆಹಲಿ: ಸಾಕಷ್ಟು ಚರ್ಚೆಗಳ ನಂತರ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಪಕ್ಷಗಳ ಮೈತ್ರಿಕೂಟ INDIA ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವರ್ಚ್ಯುಯಲ್ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರು ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಹಾಗೂ ಲೋಕಸಭಾ ಚುನಾವಣೆಯ ಬಗ್ಗೆಯೂ ಮುಖ್ಯವಾಗಿ ಚರ್ಚೆ ನಡೆಯಿತು.
ಸಭೆಯ ಬಗ್ಗೆ ಮಾಹಿತಿ ನೀಡಿದ ಸಿಪಿಐ ನ ಪ್ರಧಾನ ಕಾರ್ಯದರ್ಶಿ ಡಿ.ರಾಜ, INDIA ಮೈತ್ರಿಕೂಟದ ಹಲವು ಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು, ಖರ್ಗೆ ಮೈತ್ರಿ ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಸ್ಥಾನ ಹಂಚಿಕೆ ಬಗ್ಗೆಯೂ ಚರ್ಚೆ ನಡೆದಿದ್ದು, ಈ ಬಗ್ಗೆ ಶೀಘ್ರವೇ ದೃಢಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ I.N.D.I.A ಯ ಪ್ರಮುಖ ಸಂಚಾಲಕ ಸ್ಥಾನವನ್ನು ವಹಿಸಿಕೊಳ್ಳುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಸರ್ವಾನುಮತದ ಬೆಂಬಲ ದೊರೆತಿದ್ದರೂ, ಅವರು ಪ್ರಸ್ತಾಪವನ್ನು ನಿರಾಕರಿಸಿದರು ಮತ್ತು ಕಾಂಗ್ರೆಸ್‌ನಿಂದ ವಿಶ್ವಾಸಾರ್ಹ ವ್ಯಕ್ತಿ ಪ್ರಮುಖ ಹುದ್ದೆಯನ್ನು ವಹಿಸಿಕೊಳ್ಳಬೇಕು ಎಂದು ಪ್ರಸ್ತಾಪಿಸಿದರು ಎಂದು ಜೆಡಿಯು ನಾಯಕರೊಬ್ಬರು ಬಹಿರಂಗಪಡಿಸಿದರು.
Advertisement