ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ: ಬಚ್ಚನ್, ಅಂಬಾನಿ, ರಜನಿಕಾಂತ್ ಸೇರಿ 8,000 ಗಣ್ಯರಿಗೆ ಆಹ್ವಾನ

ಅಯೋಧ್ಯೆಯ ರಾಮ ಮಂದಿರದಲ್ಲಿ ಸೋಮವಾರ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಹಾಗೂ ಕ್ರಿಕೆಟ್...
ರಾಮ ಮಂದಿರ
ರಾಮ ಮಂದಿರ

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಸೋಮವಾರ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ವಿವಿಧ ಕ್ಷೇತ್ರಗಳ 8 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. 

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ನೀಡಿದ ಮಾಹಿತಿ ಪ್ರಕಾರ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಿನಿತಾರೆಗಳು, ಕ್ರೀಡಾ ದಿಗ್ಗಜರು, ಉದ್ಯಮಿಗಳು, ರಾಜಕೀಯ ಧುರೀಣರು, ನ್ಯಾಯಮೂರ್ತಿಗಳು, ವಿಜ್ಞಾನಿಗಳೂ ಸೇರಿದಂತೆ ವಿವಿಧ ವಲಯದ ಒಟ್ಟು 8,000 ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಪಿಟಿಐ ಲಭ್ಯವಾದ ಪಟ್ಟಿಯ ಪ್ರಕಾರ, ಅಮಿತಾಭ್ ಬಚ್ಚನ್ ಅವರು ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣಿಸಲಿದ್ದಾರೆ.

ಚಿತ್ರೋದ್ಯಮದಿಂದ, ತಮಿಳು ಸೂಪರ್‌ಸ್ಟಾರ್ ರಜನಿಕಾಂತ್, ತೆಲುಗು ಮೆಗಾ ಸ್ಟಾರ್‌ಗಳಾದ ಪ್ರಭಾಸ್, ಅಲ್ಲು ಅರ್ಜುನ್ ಮತ್ತು ಜೂನಿಯರ್ ಎನ್‌ಟಿಆರ್, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅನುಪಮ್ ಖೇರ್ ಮತ್ತು ಅಜಯ್ ದೇವಗನ್, ಕಂಗನಾ ರನೌತ್, ಮಾಧುರಿ ದೀಕ್ಷಿತ್ ಹಾಗೂ ನಟಿ, ಬಿಜೆಪಿ ಸಂಸದರಾದ ಹೇಮಾ ಮಾಲಿನಿ ಮತ್ತು ಸನ್ನಿ ಡಿಯೋಲ್ ಕೂಡ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್, ಗೀತರಚನೆಕಾರ ಮತ್ತು ಕವಿ ಮನೋಜ್ ಮುಂತಶಿರ್ ಮತ್ತು ಅವರ ಪತ್ನಿ, ಗೀತರಚನೆಕಾರ ಮತ್ತು ಬರಹಗಾರ ಪ್ರಸೂನ್ ಜೋಶಿ ಮತ್ತು ನಿರ್ದೇಶಕ ಸಂಜಯ್ ಬನ್ಸಾಲಿ ಅವರನ್ನು ಸಹ ಆಹ್ವಾನಿಸಲಾಗಿದೆ.

ಉದ್ಯಮಿಗಳಾದ ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ, ಕುಮಾರ ಮಂಗಲಂ ಬಿರ್ಲಾ, ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ, ನಂದನ್‌ ನಿಲೇಕಣಿ, ಟಿ.ವಿ.ಮೋಹನದಾಸ್‌ ಪೈ, ರತನ್‌ ಟಾಟಾ ಅವರು ಭಾಗವಹಿಸುವ ಸಾಧ್ಯತೆ ಇದೆ.

ಇನ್ನು ರಾಜಕೀಯ ವಲಯದಿಂದ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌, ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ, ರಾಮ ಮಂದಿರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಕ್ಷದ ಹಿರಿಯ ಮುಖಂಡ ಮುರಳಿ ಮನೋಹರ್‌ ಜೋಶಿ, ಅಟಲ್‌ ಬಿಹಾರಿ ವಾಜಪೇಯಿ ಅವರ ಅಳಿಯ ರಂಜನ್‌ ಭಟ್ಟಾಚಾರ್ಯ, ಮಾಜಿ ರಾಷ್ಟ್ರಪತಿಗಳಾದ ರಾಮನಾಥ್‌ ಕೋವಿಂದ್‌, ಪ್ರತಿಭಾ ಪಾಟೀಲ್‌ ಮತ್ತು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕೂಡ ಈ ಪಟ್ಟಿಯಲ್ಲಿದ್ದಾರೆ. ಬಾಬರಿ ಮಸೀದಿ ನೆಲಸಮವಾದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್‌ ಸಿಂಗ್‌ ಅವರ ಕುಟುಂಬ ಸದಸ್ಯರೆಲ್ಲರನ್ನೂ ಆಹ್ವಾನಿಸಲಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ರಂಜನ್‌ ಗೊಗೊಯ್‌ ಸೇರಿದಂತೆ ಹಲವಾರು ಹಾಲಿ ಮತ್ತು ಮಾಜಿ ನ್ಯಾಯಮೂರ್ತಿಗಳು ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com