''ಇತರರು ಏನೇ ಮಾಡಿದರೂ ಡೋಂಟ್ ಕೇರ್, ರಾಮ ಮಂದಿರ ಉದ್ಘಾಟನೆಗೆ ಹೋಗೆ ಹೋಗುತ್ತೇನೆ- ಹರ್ಭಜನ್ ಸಿಂಗ್

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ (ರಾಮನ ವಿಗ್ರಹ) 'ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಗೈರಾಗಲು ಬಹುತೇಕ ವಿಪಕ್ಷಗಳು ನಿಲುವು ತಾಳಿದರೂ ತಾವು ಪಾಲ್ಗೊಳ್ಳುವುದಾಗಿ ಮಾಜಿ ಕ್ರಿಕೆಟಿಗ ಮತ್ತು ಎಎಪಿ ಸಂಸದ ಹರ್ಭಜನ್ ಸಿಂಗ್ ಶನಿವಾರ ಹೇಳಿದ್ದಾರೆ. 
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್

ಪಂಜಾಬ್: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಗೈರಾಗಲು ಬಹುತೇಕ ವಿಪಕ್ಷಗಳು ನಿಲುವು ತಾಳಿದರೂ ತಾವು ಪಾಲ್ಗೊಳ್ಳುವುದಾಗಿ ಮಾಜಿ ಕ್ರಿಕೆಟಿಗ ಮತ್ತು ಎಎಪಿ ಸಂಸದ ಹರ್ಭಜನ್ ಸಿಂಗ್ ಶನಿವಾರ ಹೇಳಿದ್ದಾರೆ. 

"ಯಾರು ಹೋಗ್ತಾರೆ ಅಥವಾ ಹೋಗಲ್ಲ ಅನ್ನೋದು ವಿಷಯವಲ್ಲಾ. ಕಾಂಗ್ರೆಸ್ ಅಥವಾ ಇತರ ಪಕ್ಷಗಳು ಹೋಗಲಿ, ಬಿಡಲಿ ನಾನು ಖಂಡಿತವಾಗಿಯೂ ಹೋಗುತ್ತೇನೆ.  ದೇವರನ್ನು ನಂಬುವನಾಗಿ ಇದು ನನ್ನ ವೈಯಕ್ತಿಕ ನಿಲುವು. ಇದರಿಂದ ಯಾರಿಗಾದರೂ ತೊಂದರೆಯಾದರೆ ಅವರು ಬಯಸಿದಂತೆ  ಏನೇ ಮಾಡಲಿ ಎಂದು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದರು. 

ರಾಮಮಂದಿರ ಉದ್ಘಾಟನೆ ಸಮಾರಂಭವನ್ನು ವಿರೋಧ ಪಕ್ಷಗಳು ಬಹಿಷ್ಕರಿಸುವ ಮಧ್ಯೆ ಹರ್ಭಜನ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಪ್ರಚಾರದ ಅಸ್ತ್ರವಾಗಿ ದೇವಾಲಯದ ಉದ್ಘಾಟನೆಯನ್ನು ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

"ಈ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸುತ್ತಿರುವುದು ನಮ್ಮ ಅದೃಷ್ಟ, ಆದ್ದರಿಂದ ನಾವೆಲ್ಲರೂ ಹೋಗಿ ರಾಮನಿಂದ ಆಶೀರ್ವಾದವನ್ನು ಪಡೆಯಬೇಕು. ಆದ್ದರಿಂದ ಖಂಡಿತವಾಗಿಯೂ ಹೋಗುತ್ತಿದ್ದೇನೆ ಎಂದು ಹೇಳಿದರು. 

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ಹೇಳಿದ ಕೆಲವು ದಿನಗಳ ನಂತರ ಹರ್ಭಜನ್ ಸಿಂಗ್ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ. ಜನವರಿ 22ರ ನಂತರ ಪತ್ನಿ, ಮಕ್ಕಳು ಹಾಗೂ ಪೋಷಕರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com