ಪತನದ ಅಂಚಿನಲ್ಲಿ ಬಿಹಾರದ 'ಮಹಾಘಟ ಬಂಧನ್' ಸರ್ಕಾರ: ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದ ನಿತೀಶ್ ಕುಮಾರ್

ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟದಲ್ಲಿ, ಮಹಾಘಟಬಂಧನ್ (ಮಹಾಮೈತ್ರಿಕೂಟ) ಸರ್ಕಾರವು ಪತನದ ಅಂಚಿಗೆ ಸರಿದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ.
ನಿತೀಶ್ ಕುಮಾರ್ vs ತೇಜಸ್ವಿ ಯಾದವ್
ನಿತೀಶ್ ಕುಮಾರ್ vs ತೇಜಸ್ವಿ ಯಾದವ್

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟದಲ್ಲಿ, ಮಹಾಘಟಬಂಧನ್ (ಮಹಾಮೈತ್ರಿಕೂಟ) ಸರ್ಕಾರವು ಪತನದ ಅಂಚಿಗೆ ಸರಿದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ.

ನಿತೀಶ್ ಕುಮಾರ್ ಅವರು, ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ತನ್ನ ಹಿಂದಿನ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷ (BJP) ಕಡೆಗೆ ನಿರ್ಣಾಯಕ ಬದಲಾವಣೆಯ ಸೂಚನೆ ನೀಡಿದ್ದಾರೆ. ಆ ಮೂಲಕ ಜೆಡಿಯು ಮತ್ತು ಆರ್ ಜೆಡಿ ನೇತೃತ್ವದ ಮಹಾ ಘಟಬಂಧನ್ ಸರ್ಕಾರ ಪತನದ ಅಂಚಿಗೆ ತಲುಪಿದೆಯಾದರೂ ಈ ಬಗ್ಗೆ ಆರ್ ಜೆಡಿಯಾಗಲೀ ಅಥವಾ ಜೆಡಿಯು ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

ಇತ್ತ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆ ಕೈಜೋಡಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿತೀಶ್ ಕುಮಾರ್ ಅವರು ಜನವರಿ 28 ರಂದು ಜೆಡಿಯು ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲು ಪಕ್ಷದ ಎಲ್ಲಾ ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳಿಗೆ ಪಾಟ್ನಾ ತಲುಪಲು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅನಾಮಧೇಯತೆಯ ಷರತ್ತಿನ ಮೇಲೆ ಜೆಡಿಯುನ ಹಿರಿಯ ನಾಯಕರೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, “ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ಜನವರಿ 28 ರಂದು ಮುಖ್ಯಮಂತ್ರಿಗಳ ನಿವಾಸಕ್ಕೆ ಬರುವಂತೆ ತಿಳಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬಹುದು. ಇದು RJD ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವುದರ ಬಗ್ಗೆಯೂ ಇರಬಹುದು.

TNIE ಯೊಂದಿಗೆ ಮಾತನಾಡಿದ ಜೆಡಿಯು ಸಚಿವ ವಿಜಯ್ ಕುಮಾರ್ ಚೌಧರಿ, "ಮಾಧ್ಯಮದ ಒಂದು ವಿಭಾಗದಲ್ಲಿ ವರದಿ ಮಾಡಿದಂತೆ ನಿತೀಶ್ ಅವರು 'ಇಂಡಿಯಾ' ಒಕ್ಕೂಟದೊಂದಿಗೆ ಹೊರಗುಳಿಯುವುದಾಗಿ ಹೇಳಿಲ್ಲ" ಎಂದು ಟೀಕಿಸಿದ್ದಾರೆ. 

ಈ ಎಲ್ಲ ಗೊಂದಲಗಳ ನಡುವೆಯೇ ಇಂದು ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಲ್ಗೊಂಡಿದ್ದರು. ಆದರೆ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವೇದಿಕೆ ಹಂಚಿಕೊಳ್ಳಬೇಕಿತ್ತು. ಆದರೆ ಗೊಂದಲಕ್ಕೆ ಇಂಬು ನೀಡುವಂತೆ ಅವರು ಗೈರಾಗಿದ್ದರು.

ಮತ್ತೊಂದೆಡೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ತಮ್ಮ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಆರ್ ಜೆಡಿ ಪಕ್ಷದ ಕೋರ್ ಕಮಿಟಿ ಸಭೆ ನಡೆಸಿದರು. ನಿತೀಶ್ ಆರ್‌ಜೆಡಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಬಿಜೆಪಿಯೊಂದಿಗೆ ಕೈಜೋಡಿಸಿ ಹೊಸ ಸರ್ಕಾರ ರಚಿಸಿದರೆ ಮುಂದಿನ ಕ್ರಮ ಕೈಗೊಳ್ಳಲು ಲಾಲು ಯಾದವ್ ಕೂಡ ಶನಿವಾರ ಆರ್‌ಜೆಡಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ.

ಒಂದು ವೇಳೆ ನಿತೀಶ್ ಅವರು ಮಹಾಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅಥವಾ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದರೆ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಶನಿವಾರ ರಾಜಭವನದ ಮುಂದೆ ಪರೇಡ್ ನಡೆಸುವಂತೆ ಆರ್‌ಜೆಡಿ ತನ್ನ ಶಾಸಕರನ್ನು ಕೇಳಬಹುದು ಎಂದು ಮೂಲಗಳು ತಿಳಿಸಿವೆ. ಮಾತ್ರವಲ್ಲದೇ ನಿತೀಶ್ ಕುಮಾರ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿ ಅವರನ್ನು ನೂತನ ಸಿಎಂ ಮಾಡುವ ಸಾಧ್ಯತೆಗಳನ್ನು ಅನ್ವೇಷಿಸಲು ಆರ್‌ಜೆಡಿ ಈಗಾಗಲೇ ಪ್ರಯತ್ನಗಳನ್ನು ಆರಂಭಿಸಿದ್ದು, ರಾಜ್ಯದಲ್ಲಿನ ರಾಜಕೀಯ ಮೇಲಾಟಗಳ ಕುರಿತು ವಿಧಾನಸಭೆಯ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರೊಂದಿಗೆ ಲಾಲು ಪ್ರಸಾದ್ ಯಾದವ್ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂದಹಾಗೆ ಚೌಧರಿ ಅವರು ಸಿವಾನ್‌ನ ಆರ್‌ಜೆಡಿ ಶಾಸಕರಾಗಿದ್ದು, ಲಾಲು ಅವರಿಗೆ ಆಪ್ತರಾಗಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಮಾತ್ರ 79 ಶಾಸಕರನ್ನು ಹೊಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com