
ಮುಂಬೈ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧಾರಣೆ ವಿಚಾರ ಕುರಿತ ವಿವಾವದ ಹಸಿರಾಗಿರುವಂತೆಯೇ ಇತ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹರಿದ ಜೀನ್ಸ್, ಟಿ–ಶರ್ಟ್ ಧರಿಸದಂತೆ ನಿಷೇಧ ಹೇರಲಾಗಿದೆ.
ಹೌದು.. ಮುಂಬೈನ ಎನ್. ಜಿ.ಆಚಾರ್ಯ ಮತ್ತು ಡಿ. ಕೆ. ಮರಾಠೆ ಕಾಲೇಜು ಇದೀಗ ಮತ್ತೊಂದು ವಸ್ತ್ರಸಂಹಿತೆಯನ್ನು ಜಾರಿಗೆ ತಂದಿದ್ದು, ಕಾಲೇಜು ಆವರಣದಲ್ಲಿ ಹರಿದ ಜೀನ್ಸ್, ಟಿ–ಶರ್ಟ್, ಜೆರ್ಸಿ ಧರಿಸುವುದನ್ನು ನಿಷೇಧಿಸಿ ನೋಟಿಸ್ ಹೊರಡಿಸಿದೆ.
ಜೂನ್ 4ರ ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ನಿರ್ಧರಿಸಿದ್ದ ಕಾಲೇಜು ಆಡಳಿತ ಮಂಡಳಿ, ಈ ಹಿಂದೆ ಧರ್ಮವನ್ನು ಪ್ರತಿನಿಧಿಸುವ ಹಿಜಾಬ್, ನಖಾಬ್, ಬುರ್ಖಾ ನಿಷೇಧಿಸಿತ್ತು. ಕಾಲೇಜಿನ ಕ್ರಮದ ವಿರುದ್ಧ ಕೆಲ ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೆಟ್ಟೀಲೇರಿದ್ದರು.
ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್ ಜೂನ್ 26ರಂದು ಅರ್ಜಿಗಳನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಜೂನ್ 27ರಂದು ಹರಿದ ಜೀನ್ಸ್, ಟಿ–ಶರ್ಟ್ ಧರಿಸುವುದನ್ನು ನಿಷೇಧಿಸಿ ಕಾಲೇಜು ಆಡಳಿತ ಮಂಡಳಿ ನೋಟಿಸ್ ಹೊರಡಿಸಿದೆ.
‘ಕಾಲೇಜಿನ ಆವರಣದಲ್ಲಿ ಹರಿದ ಜೀನ್ಸ್, ಟಿ–ಶರ್ಟ್, ಅಸಭ್ಯ ಉಡುಪುಗಳು ಮತ್ತು ಜರ್ಸಿ ಧರಿಸಲು ಅವಕಾಶವಿಲ್ಲ. ಶೇಕಡ 75ರಷ್ಟು ಹಾಜರಾತಿ ಕಡ್ಡಾಯ. ಶಿಸ್ತು ಯಶಸ್ವಿನ ಕೀಲಿ ಕೈ’ ಎಂದು ನೋಟಿಸ್‌ನಲ್ಲಿ ಹೇಳಿದೆ. ಅಲ್ಲದೆ ‘ವಿದ್ಯಾರ್ಥಿಗಳು ಅರ್ಧ ಅಥವಾ ಪೂರ್ಣ ಕೈ ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದು. ವಿದ್ಯಾರ್ಥಿನಿಯರು ಭಾರತೀಯ ಅಥವಾ ಪಾಶ್ಚಿಮಾತ್ಯ ಉಡುಗೆಗಳನ್ನು ಧರಿಸಬಹುದು’ ಎಂದೂ ನೋಟಿಸ್‌ನಲ್ಲಿ ತಿಳಿಸಿದೆ.
ಕಾಲೇಜು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಸುಬೋಧ ಆಚಾರ್ಯ ಈ ಬಗ್ಗೆ ಮಾತನಾಡಿ, "ನೋಟೀಸ್ ಹೊಸದೇನಲ್ಲ. ನಾವು ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ಅನುಸರಿಸಲು ಹೇಳಿದ್ದೇವೆ. ವಿದ್ಯಾರ್ಥಿಗಳು ದೇಹ ಪ್ರದರ್ಶನ ಬಟ್ಟೆಗಳನ್ನು ಧರಿಸಬಾರದು.
ನಾವು ಯಾವುದೇ ನಿರ್ದಿಷ್ಟ ಬಣ್ಣದ ಸೀರೆ ಅಥವಾ ಉಡುಪುಗಳನ್ನು ಧರಿಸಲು ವಿದ್ಯಾರ್ಥಿಗಳಿಗೆ ಸೂಚಿಸಿಲ್ಲ. ವಿದ್ಯಾರ್ಥಿಗಳು ಹಿಜಾಬ್ ಅಥವಾ ಬುರ್ಕಾ ಧರಿಸಿ ಕಾಲೇಜಿಗೆ ಬಂದು ಕಾಲೇಜಿನ ಸಾಮಾನ್ಯ ಕೊಠಡಿಯಲ್ಲಿ ಅದನ್ನು ಬದಲಾಯಿಸಿ ನಂತರ ತಮ್ಮ ಕೆಲಸ ನಿರ್ವಹಿಸಬಹುದು ಎಂದು ಹೇಳಿದ್ದಾರೆ.
Advertisement