
ಕಟ್ರಾ: ಪವಿತ್ರ ಅಮರನಾಥ್ ಯಾತ್ರೆಯಿಂದ ಹಿಂದಿರುಗವಾಗ ಬಸ್ ನ ಬ್ರೇಕ್ ಫೇಲ್ಯೂರ್ ಆದ ಪರಿಣಾಮ ಬಸ್ ನೊಳಗಿದ್ದ ಯಾತ್ರಾರ್ಥಿಗಳು ಚಲಿಸುತ್ತಿದ್ದ ಬಸ್ ನಿಂದಲೇ ಕೆಳಗೆ ಜಿಗಿದಿರುವ ಘಟನೆ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಅಮರನಾಥ ಯಾತ್ರೆ ಮುಗಿಸಿ ಪಂಜಾಬ್‌ನ ಹೋಶಿಯಾರ್‌ಪುರಕ್ಕೆ ಹಿಂದಿರುಗುತ್ತಿರುವಾಗ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ಯಾತ್ರಿಕರು ಬಸ್ನಿಂದ ಹಾರಿ ಗಾಯಗೊಂಡಿದ್ದಾರೆ.
ಈ ಕುರಿತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಂಜಾಬ್‌ನ ಹೋಶಿಯಾರ್‌ಪುರಕ್ಕೆ ಹಿಂತಿರುಗುತ್ತಿದ್ದ ಸುಮಾರು 44 ಯಾತ್ರಾರ್ಥಿಗಳನ್ನು ಹೊತ್ತಿದ್ದ ಬಸ್, ಬ್ರೇಕ್ ವೈಫಲ್ಯದಿಂದಾಗಿ ಬನಿಹಾಲ್ ಬಳಿಯ ನಚ್ಲಾನಾದಲ್ಲಿ ನಿಲ್ಲಿಸಲು ವಿಫಲವಾಗಿತ್ತು.
ಚಲಿಸುತ್ತಿದ್ದ ಬಸ್ನಿಂದ ಹತ್ತು ಮಂದಿ ಕೆಳಗೆ ಹಾರಿರುವ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ, ಅದರಲ್ಲಿ ಮೂವರು ಮಹಿಳೆಯರು ಒಂದು ಮಗು ಕೂಡ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಹಿಂದೆ ಸ್ಥಳೀಯರು, ಸೈನಿಕರು ಮತ್ತು ಪೊಲೀಸರು ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಬಸ್ ನಿಲ್ಲಿಸಿ ಜನರ ಪ್ರಾಣ ಉಳಿಸಿದ ಭಾರತೀಯ ಸೇನೆ ಸೈನಿಕರು
ಇನ್ನು ಚಲಿಸುತ್ತಿದ್ದ ವಾಹನದಿಂದ ಯಾತ್ರಾರ್ಥಿಗಳು ಜಿಗಿಯುತ್ತಿರುವುದನ್ನು ಗಮನಿಸಿದ ಸೇನಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಬಸ್‌ನ ಟೈರ್‌ಗಳ ಕೆಳಗೆ ಕಲ್ಲುಗಳನ್ನು ಇಟ್ಟು ಬಸ್ ನದಿಗೆ ಬೀಳದಂತೆ ತಡೆದಿದ್ದಾರೆ.
ಅಲ್ಲದೆ ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆ ಮೂಲಕ ಜಮ್ಮು-ಕಾಶ್ಮೀರ ಹೆದ್ದಾರಿಯಲ್ಲಿ ಸಂಭಾವ್ಯ ಅಪಘಾತವನ್ನು ಸೈನಿಕರು ತಪ್ಪಿಸಿದ್ದಾರೆ.
Advertisement