
ನವದೆಹಲಿ: ಅಗ್ನಿವೀರರು ಯೂಸ್ ಅಂಡ್ ಥ್ರೋ ಕಾರ್ಮಿಕರಿದ್ದಂತೆ' ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಭಾರತೀಯ ಸೇನೆ ತಿರುಗೇಟು ನೀಡಿದ್ದು, ಅಗ್ನಿವೀರರಿಗೆ 98 ಲಕ್ಷ ರೂ ಪರಿಹಾರ ವಿತರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯ ವೇಳೆ ‘ಅಗ್ನಿವೀರರು ಯೂಸ್ ಅಂಡ್ ಥ್ರೋ ಕಾರ್ಮಿಕರಿದ್ದಂತೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟು, ಹುತಾತ್ಮ ಯೋಧರಿಗೆ ಕಿಂಚಿತ್ತೂ ಪರಿಹಾರ ನೀಡಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದರು.
ಹುತಾತ್ಮ ಯೋಧನ ತಂದೆ ಜೊತೆ ರಾಹುಲ್ ಮಾತುಕತೆ
ಹುತಾತ್ಮ ಯೋಧ ಅಜಯ್ ಕುಮಾರ್ ಅವರ ತಂದೆ ಜೊತೆಮಾತುಕತೆ ನಡೆಸಿರುವ ವಿಡಿಯೋವನ್ನು ಎಕ್ಸ್‌ನಲ್ಲಿ ಹರಿಬಿಟ್ಟಿರುವ ರಾಹುಲ್ ಗಾಂಧಿ, ಸರ್ಕಾರದಿಂದ ಅಜಯ್ ಕುಮಾರ್ ಅವರ ಕುಟುಂಬಕ್ಕೆ ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಸಾಲದೆನ್ನುವುದಕ್ಕೆ ಅಜಯ್ ಕುಮಾರ್ ಅವರ ತಂದೆ ಕೂಡ ಸೇನೆ ಹಾಗೂ ಸರ್ಕಾರದಿಂದ ಕಿಂಚಿತ್ತೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದ್ದರು.
ಇದಕ್ಕೆ ಉತ್ತರ ನೀಡಿರುವ ಭಾರತೀಯ ಸೇನೆ(Indian Army), ಕರ್ತವ್ಯದಲ್ಲಿದ್ದಾಗ ನಿಧನರಾದ ಅಗ್ನಿವೀರ್ ಅಜಯ್ ಕುಮಾರ್ ಅವರ ಕುಟುಂಬಕ್ಕೆ ಪರಿಹಾರವಾಗಿ 98 ಲಕ್ಷ ರೂ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಪರಿಹಾರ ನೀಡಿರುವ ಬಗ್ಗೆ ಸೇನೆ ಪೋಸ್ಟ್
ರಾಹುಲ್ ಗಾಂಧಿ ಆರೋಪಕ್ಕೆ ಸೇನೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡುವ ಮೂಲಕ ತಿರುಗೇಟು ಕೊಟ್ಟಿದೆ. ಕರ್ತವ್ಯದಲ್ಲಿರುವಾಗ ಮೃತಪಟ್ಟ ಅಗ್ನಿವೀರ್ ಅಜಯ್ ಕುಮಾರ್ ಅವರ ಕುಟುಂಬಕ್ಕೆ ಪರಿಹಾರ ಒದಗಿಸಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪೋಸ್ಟ್‌ಗಳು ಹೇಳಿವೆ. ಒಟ್ಟಾರೆ ಮೊತ್ತದಲ್ಲಿ ಅಗ್ನಿವೀರ್ ಅಜಯ ಅವರ ಕುಟುಂಬಕ್ಕೆ ಈಗಾಗಲೇ 98.39 ಲಕ್ಷ ರೂ ನೀಡಲಾಗಿದೆ.
ಅಗ್ನಿವೀರ್ ಯೋಜನೆಯ ನಿಯಮಗಳ ಅಡಿಯಲ್ಲಿ ಅನ್ವಯವಾಗುವಂತೆ ಅನುಗ್ರಹ ಪೂರ್ವಕವಾಗಿ ನೀಡಲಾಗುವ ಪರಿಹಾರ (ಎಕ್ಸ್- ಗ್ರೇಷಿಯಾ) ಮತ್ತು ಇತರೆ ಪ್ರಯೋಜನಗಳ ಅಂದಾಜು 67 ಲಕ್ಷ ರೂ ಮೊತ್ತವನ್ನು ಬಾಕಿ ಇರುವ ಪೊಲೀಸ್ ಪರಿಶೀಲನೆ ಬಳಿಕ ಕೂಡಲೇ ಅಂತಿಮ ಸೆಟ್ಲ್‌ಮೆಂಟ್ ಆಗಿ ಅವರ ಖಾತೆಗೆ ಜಮಾವಣೆ ಮಾಡಲಾಗುವುದು. ಒಟ್ಟಾರೆ ಮೊತ್ತವು ಅಂದಾಜು 1.65 ಕೋಟಿ ರೂ,ನಷ್ಟು ಹಣ ಅವರಿಗೆ ಸಿಗಲಿದೆ ಎಂದು ಸೇನೆ ತಿಳಿಸಿದೆ.
Advertisement