
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅನುರಾಗ್ ಠಾಕೂರ್ ಅವರು ತಪ್ಪಾದ ಹೇಳಿಕೆಗಳನ್ನು ನೀಡಿದ್ದಾರೆ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.
ಮೋದಿ ಹಾಗೂ ಠಾಕೂರ್ ಹೇಳಿಕೆಗಳ ವಿರುದ್ಧ ನಿರ್ದೇಶನದ ನಿಬಂಧನೆಗಳ 115(1) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಗೆ ಮಾಣಿಕ್ಕಂ ಠಾಗೋರ್ ಮನವಿ ಮಾಡಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ, ಸರ್ಕಾರ ರಚನೆ, ಅಧಿಕಾರಕ್ಕೆ ಬರುವುದಕ್ಕಾಗಿ ಮಹಿಳೆಯರಿಗೆ ಮಾಸಿಕ 8,500 ರೂ.ಗಳ "ಸುಳ್ಳು ಭರವಸೆ" ನೀಡಿತ್ತು ಎಂದು ಹೇಳಿದ್ದಕ್ಕೆ ಮಾಣಿಕ್ಕಂ ಠಾಗೋರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಏಕಾಂಗಿಯಾಗಿ ಸ್ಪರ್ಧಿಸಿದ 16 ರಾಜ್ಯಗಳಲ್ಲಿ ಕಾಂಗ್ರೆಸ್ ಮತಗಳಿಕೆ ಕಡಿಮೆಯಾಗಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಸಂಸದ ಸವಾಲು ಹಾಕಿದ್ದಾರೆ
"ಪ್ರಧಾನಿ ಮೋದಿ ಅವರ ಈ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಕರ್ನಾಟಕ, ತೆಲಂಗಾಣ ಇತ್ಯಾದಿಗಳಲ್ಲಿ ಕಾಂಗ್ರೆಸ್ ಮತಗಳ ಪ್ರಮಾಣ ಹೆಚ್ಚಿದೆ" ಎಂದು ಠಾಗೋರ್ ಸ್ಪೀಕರ್ ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. "ಕಾಂಗ್ರೆಸ್ ಕಾಲದಲ್ಲಿ ಸೇನೆಗೆ ಯಾವುದೇ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸಿರಲಿಲ್ಲ" ಎಂಬ ಮೋದಿಯವರ ಟೀಕೆಗಳನ್ನು "ತೀರಾ ತಪ್ಪುದಾರಿಗೆಳೆಯುವ" ಹೇಳಿಕೆ ಎಂದು ಮಾಣಿಕ್ಕಂ ಠಾಗೋರ್ ಹೇಳಿದ್ದಾರೆ.
"ಜಾಕೆಟ್‌ಗಳ ಕೊರತೆ ಇತ್ತು, ಜಾಕೆಟ್‌ಗಳು ಇರಲಿಲ್ಲ ಎಂದಲ್ಲ. ಪೊಲೀಸರು ಕೂಡ ಮುಂಬೈ ದಾಳಿಯಂತೆ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಹೊಂದಿದ್ದರು" ಎಂದು ಟ್ಯಾಗೋರ್ ಹೇಳಿದ್ದಾರೆ.
Advertisement